ಬ್ಯಾಂಕ್ ಪಾಸ್ ಪುಸ್ತಕ ಪ್ರದರ್ಶಿಸಿ ಆಕ್ರೋಶ
ದಾವಣಗೆರೆ, ಜು.27- ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿಪಡಿಸುವುದೂ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ, ಕೈಗೊಂಡಿರುವ ಅನಿರ್ದಿಷ್ಟ ಹೋರಾಟವು ಇಂದಿಗೆ 18 ದಿನಗಳನ್ನು ಪೂರೈಸಿದೆ.
ಹೋರಾಟದ ತೀವ್ರ ಸ್ವರೂಪವಾಗಿ ನಗರದ ಶ್ರೀ ಜಯದೇವ ಮುರುಘಾರಾಜೆಂದ್ರ ವೃತ್ತದಲ್ಲಿ ಇಂದು ಆಶಾ ಕಾರ್ಯಕರ್ತೆಯರು ತಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಎಐಡಿಎಸ್ಓ, ಎಐಡಿವೈಓ, ಎಐಎಂಎಸ್ಎಸ್ ಸಂಘಟನೆಗಳು ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ಹಳ್ಳಿಯ ಬೇರು ಮಟ್ಟದಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗ್ಯೂ, ಚಿಕನ್‍ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಾ ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿಯ ಕುರಿತು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದಲ್ಲಿನ ಸಮುದಾಯದ ಆರೋಗ್ಯಕರ ಬದಲಾವಣೆಗೆ ಸದ್ದಿಲ್ಲದೇ ದುಡಿಯುತ್ತಾ, ಹಗಲಿರುಳೆನ್ನದೇ ವಿಷಮ ಸನ್ನಿವೇಶಗಳಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಮೊರೆ ಸರ್ಕಾರದ ಕಿವಿ ಮುಟ್ಟದೇ ಇರುವುದು ಅತ್ಯಂತ ವಿಷಾದನೀಯ. ಸರ್ಕಾರ ಇವರ ಸೇವೆಯನ್ನು ನಿರಾಕರಿಸಿ, ಬಡಜನತೆಯ ಬಗೆಗಿನ ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ ಎಂದು ಸಂಘಟನೆಗಳ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ಕೋವಿಡ್-19 ಗೆ ತುತ್ತಾದ ಆಶಾಗೆ ಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕು ಎಂಬ ಆಶಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ನಾಳೆಯ ಒಳಗೆ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಖ್ಯಮಂತ್ರಿ ಮನೆಗೆ ಹಾಗೂ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾಧ್ಯಕ್ಷರಾದ ಜಿ. ಸೌಮ್ಯ, ಎಐಡಿವೈಓ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಎಂಎಂಎಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕುವಾಡ, ಭಾರತಿ, ರುಕ್ಕಮ್ಮ, ಶೀಲಾ, ಯಶೋಧ, ಜ್ಯೋತಿ, ರೇಣುಕಾ, ಫರ್ವೀನ್ ಬಾನು, ಆಶಾ, ಸಿದ್ದಮ್ಮ, ಸಂತೋಷ್ ಕುಮಾರ್ , ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ನಾಯಕ ಬೀರಲಿಂಗಪ್ಪ ನೀರ್ಥಡಿ, ಪರಶುರಾಮ, ಪುಷ್ಪ, ಮಮತ, ಧನುಷ್ ಮತ್ತು ಇತರರು ಭಾಗವಹಿಸಿದ್ದರು.