ಸಿಬ್ಬಂದಿ ವರ್ಗಕ್ಕೆ ಹರಿಹರದ ತಹಶೀಲ್ದಾರ್ ರಾಮಚಂದ್ರಪ್ಪ
ಹರಿಹರ, ಜು.27- ವಾರ್ಡ್ ಲೆವೆಲ್ ಟಾಸ್ಕ್‌ಫೋರ್ಸ್ ಸಮಿತಿ ವಾರದಲ್ಲಿ ಮೂರು ದಿನ ಸಭೆ ಮಾಡಿ ಕಂಟೈನ್‌ಮೆಂಟ್ ಝೋನ್‌ನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಶ್ರಮ ವಹಿಸಿ, ಕೆಲಸ ನಿರ್ವಹಣೆ ಮಾಡಬೇಕು ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಇಂದು ವಿವಿಧ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಥಮ ಮತ್ತು ದ್ವೀತಿಯ ಸಂಪರ್ಕದಲ್ಲಿ ಇರುವಂತಹ ವ್ಯಕ್ತಿಗಳ ಸರ್ವೇ ಮಾಡಿ, ರೋಗ ಲಕ್ಷಣಗಳು ಇದ್ದವರನ್ನು ತಪಾಸಣೆಗೆ ಒಳಪಡಿಸುವ ಕೆಲಸಕ್ಕೆ ಮುಂದಾಗಿ. ಕರ್ತವ್ಯ ನಿರ್ವಹಣೆ ಮಾಡುವಾಗ ಅಧಿಕಾರಿಗಳು ಬಹಳ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಣೆ ಮಾಡಬೇಕು. ಒಂದು ವೇಳೆ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದರೆ, ಅಂತಹ ಅಧಿಕಾರಿಗಳ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು
ಹೇಳಿದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿ ದ್ರವ ಪರೀಕ್ಷಾ ರಿಪೋರ್ಟ್ ಬರುವ ತನಕ ಕೊರೊನಾ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿ ಯಾವುದೇ ತೊಂದರೆಯಾಗ ದಂತೆ ಕಾಳಜಿಯಿಂದ ನೋಡಿಕೊಳ್ಳಬೇಕು. ಕೆಲವು ವ್ಯಕ್ತಿಗಳು ತಪಾಸಣೆ ಮಾಡಿಸಲು ಮುಂದಾಗುವುದಿಲ್ಲ ಮತ್ತು ಕಂಟೈನ್‌ಮೆಂಟ್ ಝೋನ್ ಮಾಡುವುದಕ್ಕೆ ವಿರೋಧ ಮಾಡುತ್ತಾರೆ.
ಅಂತಹ ವ್ಯಕ್ತಿಗಳಿಗೆ ಸರಿಯಾಗಿ ತಿಳಿಹೇಳಿ, ಅವರನ್ನು ಮನವೊಲಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಡಾ.ಚಂದ್ರಮೋಹನ್ ಮಾತನಾಡಿ, ಕೊರೊನಾ ರೋಗದ ಪ್ರಕರಣಗಳು ಬಂದರೆ, ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಕೊರೊನಾ ರೋಗದ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳಿಗೆ ಎಲ್ಲಾ ಅಧಿಕಾರಿಗಳು ಗುಂಪಾಗಿ ಅವರನ್ನು ಮನವೊಲಿಸಲು ಮುಂದಾಗಿ ಅವರನ್ನು ತಪಾಸಣೆ ಮಾಡಿಸಲು ಮುಂದಾಗಬೇಕು. ಇವಾಗ ಕೊರೊನಾ ರೋಗದ ಲಕ್ಷಣಗಳು ಹರಡಿಕೊಂಡ ವ್ಯಕ್ತಿಗಳು ಭಯವನ್ನು ಪಡುವ ಅವಶ್ಯಕತೆ ಇರುವುದಿಲ್ಲ. ಚಿಕಿತ್ಸೆ ಪಡೆದುಕೊಂಡು ಬಹಳ ಬೇಗನೇ ಗುಣಮುಖರಾಗಿ ಮನೆಗಳಿಗೆ ತೆರಳುತ್ತಿದ್ದಾರೆ. ಇದರಿಂದಾಗಿ ಯಾರೂ ಆತಂಕ ಪಡಬಾರದು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ನಟರಾಜ್, ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್.ಲಕ್ಷ್ಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪರಮೇಶ್ವರಪ್ಪ, ಶಿಕ್ಷಣ ಇಲಾಖೆಯ ಶಿವಾನಂದ, ಡೊಂಕಪ್ಪ, ರಮೇಶ್, ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.