ಕಾರ್ಮಿಕರ, ರೈತರ ಬೇಡಿಕೆ ಈಡೇರಿಕೆಗೆ ಸಿಐಟಿಯು ಪ್ರತಿಭಟನೆ

ದಾವಣಗೆರೆ, ಜು.25- ಕಾರ್ಮಿಕರ, ಕೃಷಿ ಕೂಲಿ ಕಾರ್ಮಿಕರ ಮತ್ತು ರೈತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ತಾಲ್ಲೂಕು ಕಛೇರಿ ಮುಂದೆ   ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ಮೊನ್ನೆ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರಧಾನಮಂತ್ರಿ ಅವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಜನತೆ ಹಾಗೂ ದೇಶವನ್ನು ಕೋವಿಡ್-19 ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕೋವಿಡ್-19 ವೈರಾಣುವನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ನಾಗರಿಕರುಗಳಿಗೆ ಉಚಿತ ಹಾಗೂ ಸುರಕ್ಷತಾ ಚಿಕಿತ್ಸೆ ದೊರೆಯುವಂತೆ ಕ್ರಮ ವಹಿಸಬೇಕು. ಇದಕ್ಕಾಗಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ ಶೇ. 3ರಷ್ಟು ಅಂಶವನ್ನು ವೆಚ್ಚ ಮಾಡಲು ಕ್ರಮ ವಹಿಸಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ದೇಶದ ಎಲ್ಲಾ ಕುಟುಂಬಗಳಿಗೆ ಕನಿಷ್ಟ ಕೋವಿಡ್-19 ಸಮಸ್ಯೆ ಇತ್ಯರ್ಥವಾಗುವವರೆಗೆ ಮಾಸಿಕ 7,500 ರೂ.ಗಳ ನೆರವು ಘೋಷಿಸಬೇಕು. ಈ ಎಲ್ಲಾ ಕುಟುಂಬಗಳ ಸದಸ್ಯರಿಗೆ, ಮಾಸಿಕ ತಲಾ 10ಕಿ.ಲೋ ಸಮಗ್ರ ಆಹಾರ ಸಾಮಗ್ರಿಗಳನ್ನು ಒದಗಿಸಬೇಕು ಹಾಗೂ ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಕಿಟ್‍ಗಳನ್ನು ಒದಗಿಸಬೇಕು ಎಂದು  ಆಗ್ರಹಿಸಿದರು.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಯ ತಿದ್ದುಪಡಿ ಹಿಂಪಡೆಯಬೇಕು. ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ಸಂಸ್ಥೆಗಳ ಖಾಸಗೀಕರಣವನ್ನು ತಡೆಯಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ಉದ್ಯೋಗ ಕೇಳುವ ಎಲ್ಲಾ ಜನತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ತಲಾ ಕುಟುಂಬಕ್ಕೆ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು. ಕೂಲಿ ಹಣವನ್ನು ಕನಿಷ್ಟ 600ಕ್ಕೆ ಹೆಚ್ಚಿಸಬೇಕು. ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ನಿರುದ್ಯೋಗ ಭತ್ಯೆ ಮಾಸಿಕ 10 ಸಾವಿರ ಒದಗಿಸಬೇಕು. ಎಲ್ಲ ರೀತಿಯ ಕಾರ್ಮಿಕರುಗಳಿಗೆ ಲಾಕ್ ಡೌನ್ ಅವಧಿಯ ವೇತನ ದೊರೆಯುವಂತೆ ಅಗತ್ಯ ಕ್ರಮ ವಹಿಸಬೇಕು. ಕಾರ್ಮಿಕ ಕಾಯ್ದೆಗಳ ದುರ್ಬಲಗೊಳಿಸುವಿಕೆಯನ್ನು ತಕ್ಷಣ ತಡೆಯಬೇಕು. ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ವಲಯದ ಸಂಸ್ಥೆಗಳ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು. ವ್ಯವಸಾಯವನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸುವ ಎಲ್ಲಾ ಭೂ ಹಾಗೂ ವ್ಯವಸಾಯ ಸಂಬಂಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಸಾರ್ವಜನಿಕರನ್ನು ಕಾಳಸಂತೆಯ ಲೂಟಿಕೋರತನಕ್ಕೆ ಒಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020ನ್ನು ವಾಪಾಸ್ ಪಡೆಯಬೇಕು ಎಂದು ಮನವಿ ಮಾಡಿದರು.

 ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು, ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್ ಎಸ್) ಜಿಲ್ಲಾ ಮುಖಂಡ ಇ. ಶ್ರೀನಿವಾಸ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ (ಎಐಎಡಬ್ಲ್ಯೂಯು)  ಜಿಲ್ಲಾ ಮುಖಂಡ ಎ. ಗುಡ್ಡಪ್ಪ, ತಿಮ್ಮಣ್ಣ ಹೊನ್ನೂರು, ತಿಮ್ಮಾರೆಡ್ಡಿ, ಭರಮಪ್ಪ, ಹಿರೇಮಠ್, ಸೈಯದ್ ಜಬಿ, ತಿಪ್ಪೇಶ್, ಖಲಂದರ್, ಹಾಲೇಶ ನಾಯ್ಕ, ಸುರೇಶ್, ಎ. ವೆಂಕಟೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!