ಜಗಳೂರು : ಕೊರೊನಾ ನಿಯಂತ್ರಣದ ಕುರಿತಂತೆ ಜಾಗೃತಿ ಸಭೆಯಲ್ಲಿ ಕಿಡಿ ಕಾರಿದ ಶಾಸಕ ಎಸ್.ವಿ.ರಾಮಚಂದ್ರ ಮತ್ತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಜಗಳೂರು, ಜು. 23- ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಯಂತ್ರಣ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಥವಾ ತಪ್ಪು ಮಾಡುವ ಅಧಿಕಾರಿಗಳನ್ನು ರಕ್ಷಿಸುವುದಿಲ್ಲ ಎಂದು ಶಾಸಕ ಎಸ್.ವಿ. ರಾಮಚಂದ್ರ ಖಡಕ್ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೊರೊನಾ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಅವರ ತಂಡ ಹಗಲಿರುಳು ಕೊರೊನಾ
ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದೆ. ಅವರು ನೀಡುವ ಎಲ್ಲಾ ಮಾರ್ಗ ಸೂಚಿಗಳನ್ನು ಪಾಲಿಸಿ ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ಅರಿವು ಮೂಡಿಸುವ ಹಾಗೂ ಬೂತ್ ಮಟ್ಟದ ಜಾಗೃತಿ ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಕೇವಲ ಕಾಗದದಲ್ಲಿ ಸಮಿತಿಗಳ ರಚನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ತಕ್ಷಣವೇ ಆಡಳಿತಾಧಿ ಕಾರಿಗಳು ತಮ್ಮ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಪಿಡಿಒಗಳ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅನುಷ್ಠಾನದ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಅರ್ಧದಿನ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮದ್ಯದ ಅಂಗಡಿಗಳು ಲಾಕ್‍ಡೌನ್ ಇದ್ದರೂ ರಾತ್ರಿ 7ರ ವರೆಗೆ ತೆರೆದುಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪ ಡಿಸಿದ ಶಾಸಕರು, ಜಿಲ್ಲಾಧಿಕಾರಿಗಳ ಸಮಕ್ಷಮ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನೂ ಒಂದು ವಾರಗಳ ಕಾಲ ಅರ್ಧ ದಿನದ ಅಂದರೆ ಮಧ್ಯಾಹ್ನ ಎರಡು ಗಂಟೆ ನಂತರ ಸಂಪೂರ್ಣ ಲಾಕ್‍ಡೌನ್ ಮಾಡಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.
ಶಾಸಕರ ಎದುರೇ ಅಧಿಕಾರಿಗಳ ಚಳಿ ಬಿಡಿಸಿದ ಡಿಸಿ ಬೀಳಗಿ: ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಅಸಮಧಾನಗೊಂಡಂತೆ ಕಂಡುಬಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಶಾಸಕರ ಎದುರಿನಲ್ಲೇ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ತಾಲ್ಲೂಕಿನಲ್ಲಿ ಎಷ್ಟು ಕಂಟೈನ್ಮೆಂಟ್ ಏರಿ ಯಾಗಳಿವೆ? ಯಾವ ರೀತಿಯ ಕ್ರಮ ಕೈಗೊಳ್ಳ ಲಾಗಿದೆ? ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕಗೊಂಡ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳೇನು? ಕಾರ್ಯ ನಡೆಯುತ್ತಿದೆಯೇ, ಬೂತ್ ಮಟ್ಟದ ಮತ್ತು ವಾರ್ಡ್ ಮಟ್ಟದ ಕಮಿಟಿಗಳು ಸೇರಿ ಯಾವ ಯಾವ ಕೆಲಸಗಳನ್ನು ಮಾಡಿವೆ? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ, ಕಂದಾಯ, ಪೊಲೀಸ್ ಹಾಗೂ ಪಟ್ಟಣ ಪಂಚಾ ಯಿತಿ ಮುಖ್ಯ ಅಧಿಕಾರಿಗಳು, ಸಮರ್ಪಕ ಉತ್ತರ ನೀಡುವಲ್ಲಿ ತಡವರಿಸುತ್ತಿದ್ದರು.
ರೋಗದ ಲಕ್ಷಣಗಳು ಇರುವವರನ್ನು ಮಾತ್ರ ರಾಪಿಡ್ ಟೆಸ್ಟ್ ಮಾಡಬೇಕು, ಕೊರೊನಾ ಕೇರ್ ಸೆಂಟರ್ ಬಳಿ ತಕ್ಷಣ ಸುಸಜ್ಜಿತವಾದ ಅಂಬ್ಯೂಲೆನ್ಸ್ ಕಾಯ್ದಿರಿಸಬೇಕು, ಖಾಸಗಿ ನರ್ಸಿಂಗ್ ಹೋಮ್ ಗಳಲ್ಲಿರುವ ಬೆಡ್ ಗಳಲ್ಲಿ ಶೇ. 50 ಬೆಡ್‍ಗಳನ್ನು ಕಾಯ್ದಿರಿಸಲು ಸೂಚನೆ ನೀಡಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಯವರು ನೀಡುವ ಕೆಮ್ಮು, ಜ್ವರ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರ ಪಟ್ಟಿಯನ್ನು ಪಡೆದು ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಬೇಕು, ಅಗತ್ಯಬಿದ್ದಲ್ಲಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ರೋಗಿಗಳನ್ನು ಆಸ್ಪತ್ರೆಗೆ ತಕ್ಷಣವೇ ಕರೆತಂದರೆ ರಕ್ಷಿಸಬಹುದು. ಆದರೆ ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಕರೆ ತಂದರೆ ಪ್ರಯೋಜನವಾಗುವುದಿಲ್ಲ ಎಂದರು.
ಸಭೆಯಲ್ಲಿ ತಹಶೀಲ್ದಾರ್ ನಾಗವೇಣಿ, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಾನಾಯಕ, ಸರ್ಕಲ್ ಇನ್ಸ್‌ಪೆಕ್ಟರ್ ದುರುಗಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.