3 ಲಕ್ಷ ಮೌಲ್ಯದ 7 ಆಕಳು – ಮಿನಿ ಲಾರಿ ವಶ
ದಾವಣಗೆರೆ, ಜು.22- ಗ್ರಾಮಾಂತರ ಭಾಗಗಳಲ್ಲಿ ಜಾನುವಾರುಗಳನ್ನು ಕಳವು ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ದೊಡ್ಡ ಮಾಗಡಿ ಗ್ರಾಮದ ವಿನೋದ್ರಾಜ್, ಹರಪನಹಳ್ಳಿ ತಾಲ್ಲೂಕು ಮಡಕಿನಿಚ್ಚಾಪುರ ತಾಂಡಾದ ಪ್ರವೀಣ್ನಾಯ್ಕ ಮತ್ತು ಉಮೇಶ್ ನಾಯ್ಕ ಎಂಬುವವರುಗಳನ್ನು ಗುಡಾಳ್ ಗ್ರಾಮದಲ್ಲಿ ಇಂದು ಬಂಧಿಸಿ, ಮೂರು ಲಕ್ಷ ಮೌಲ್ಯದ ಏಳು ಆಕಳು ಮತ್ತು ಒಂದು ಲಕ್ಷ ಮೌಲ್ಯದ ಮಿನಿ ಲಾರಿ ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ತನಿಖೆ ನಡೆಸಿದಾಗ ಸುಮಾರು 20-25 ದಿನಗಳಿಂದ ಗುಡಾಳು, ಕಾಟಿಹಳ್ಳಿ ಲಂಬಾಣಿಹಟ್ಟಿ, ಸಿದ್ದನೂರು, ನೇರಲಗಿ, ಲಕ್ಷ್ಮಿಪುರ ತಾಂಡಾ ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ಹಸುಗಳನ್ನು ಕಳ್ಳತನ ಮಾಡಿ ಚಿಕ್ಕಮಗಳೂರು ಜಿಲ್ಲೆಯ ಎಂ.ಎಲ್. ತಾಂಡಾದ ಲೋಕೇಶನಾಯ್ಕಗೆ ನೀಡುತ್ತಿದ್ದೇವೆಂದು ಬಂಧಿತರು ಬಾಯಿ ಬಿಟ್ಟಿದ್ದಾರೆ.
ಕಾಟಿಹಳ್ಳಿ ತಾಂಡಾದ ಮಂಜನಾಯ್ಕ ಅವರ ಎರಡು ಹಸುಗಳು ಕಳ್ಳತನವಾದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜೀವ್ ನಿರ್ದೇಶನದಂತೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ. ಮಂಜುನಾಥ, ಪಿಎಸ್ ಐಗಳಾದ ಸಂಜೀವ್ ಕುಮಾರ್, ಎಂ. ಪಾಷಾ ಅವರ ನೇತೃತ್ವದ ತಂಡ ಕಾರ್ಯಾಚರಣೆ ಯಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಇಂದು ಸಂಜೆ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣ, ಮಾಯಕೊಂಡ ಹಾಗೂ ಅರಸೀಕೆರೆ ಪೊಲೀಸ್ ಠಾಣೆಗ ಳಲ್ಲಿ ತಲಾ ಒಂದು ಪ್ರಕರಣ ಒಟ್ಟು ಏಳು ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿಲಾಗಿದೆ. ಪತ್ತೆ ಕಾರ್ಯಾಚರಣೆ ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪರಶುರಾಮ್, ಪ್ರಕಾಶ್, ನಾಗರಾಜಯ್ಯ, ತನಿಖಾ ಸಹಾಯಕ ಅರುಣಕುಮಾರ ಕುರುಬರ, ರಾಘವೇಂದ್ರ, ಉಮೇಶ್ ಬಿಸ್ನಳ್ಳಿ, ಶಾಂತರಾಜ್ ಇದ್ದರು. ಅವರುಗಳ ಈ ಕಾರ್ಯಕ್ಕೆ ಬಹುಮಾನ ಘೋಷಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ, ಗ್ರಾಮಾಂತರ ವೃತ್ತ ನಿರೀಕ್ಷಕ ಬಿ. ಮಂಜುನಾಥ, ಪಿಎಸ್ಐಗಳಾದ ಸಂಜೀವ್ಕುಮಾರ್, ಎಂ. ಪಾಷಾ ಸೇರಿದಂತೆ ಇತರರು ಇದ್ದರು.