ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಸಂಕಲ್ಪ
ರಾಣೇಬೆನ್ನೂರು, ಅ.24 – ಈಗ ರಾಮ ಮಂದಿರ ಕಟ್ಟುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೇವಸ್ಥಾನ ಕೆಡವಿ ಕಟ್ಟಿದ ಎಲ್ಲ ಮಸೀದಿಗಳನ್ನು ಕೆಡವಿ ದೇವಸ್ಥಾನಗಳನ್ನು ಕಟ್ಟುತ್ತೇವೆ. ಇದು ನಮ್ಮ ಸಂಕಲ್ಪ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ಎಸ್.ಜೆ.ಎಂ.ವಿ ಮಹಿಳಾ ಕಾಲೇಜಿನಲ್ಲಿ ಪಶ್ಚಿಮ ಪದವೀಧರ ಅಭ್ಯರ್ಥಿ ಎಸ್.ವಿ.ಸಂಕನೂರ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಸ್ಲಿಮರಿಗೆ ರಕ್ಷಣೆ ಇಲ್ಲಾ ಎನ್ನುತ್ತಾ ಹಿಂದೂ- ಮುಸ್ಲಿಮರ ನಡುವೆ ಜಗಳ ಹಚ್ಚಿ ದೇಶದಲ್ಲಿ ಅಶಾಂತಿ ಸೃಷ್ಠಿಸುವ ಕಾಂಗ್ರೆಸ್ ಆ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ನಾನೇ ಎನ್ನುತ್ತಾರೆ. ಡಿ.ಕೆ ಶಿವಕುಮಾರ್ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ. ಚುನಾವಣೆನೇ ನಡೆದಿಲ್ಲ ಅದ್ಹೇಗೆ ಮುಖ್ಯಮಂತ್ರಿಗಳಾಗತೀರಾ ಎಂದು ಹೆಚ್.ಕೆ.ಪಾಟೀಲ ಪ್ರಶ್ನಿಸುತ್ತಾರೆ. ಕಾಂಗ್ರೆಸ್ ನವರು ಹಗಲು, ರಾತ್ರಿ ಸಹ ಕನಸು ಕಾಣುತ್ತಿದ್ದಾರೆ ಎಂದು ಈಶ್ವರಪ್ಪ ಕುಟುಕಿದರು.
ಕೋಟ್ಯಾಂತರ ಹಣ ಲಪಟಾಯಿಸಿ ಜೈಲಿಗೆ ಹೋದ ಶಿವಕುಮಾರ ಅವರನ್ನು ವಿಧಾನಸೌಧದ ಎದುರು ಮಹಾಯುದ್ದದಲ್ಲಿ ಜಯಗಳಿಸಿದವರಂತೆ ಮೆರವಣಿಗೆ ಮಾಡುತ್ತಾರೆ.
ಭ್ರಷ್ಟಾಚಾರ ಮಾಡಿದವರ ಮನೆ ರೇಡ್ ಆದರೆ ಬಿಜೆಪಿ ಮೇಲೆ ಆಪಾದನೆ ಮಾಡುತ್ತಾರೆ. ಈ ಯಾವ ಆಪಾದನೆಗಳಿಗೂ ಕೇರ್ ಮಾಡಲ್ಲ. ಈ ಎಲ್ಲವುಗಳನ್ನು ದಾಟಿ ಸ್ವಾಭಿಮಾನಿ ದೇಶ ಕಟ್ಟುವುದೇ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಗುರಿ ಎಂದು ಈಶ್ವರಪ್ಪ ಗುಡುಗಿದರು.
ಬಿಜೆಪಿಯಲ್ಲಿ ಕಾರ್ಯಕರ್ತರಾಗುವುದೇ ಪುಣ್ಯ. ಅವರು ಪುಣ್ಯವಂತರು. ಅಂತಹ ಕಾರ್ಯಕರ್ತರ ಪಡೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದರಿಂದ ಚುನಾವಣೆ ಯಲ್ಲಿ ನಮ್ಮ ಅಭ್ಯರ್ಥಿಗಳ ಜಯ ಖಚಿತ. ಆ ಮೂಲಕ ಯಡಿಯೂರಪ್ಪ ಅವರಿಗೆ ಮತ್ತಷ್ಟು ಬಲ ಬರಲಿದೆ ಎಂದು ಈಶ್ವರಪ್ಪ ಹೇಳಿದರು.
ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ ಪೂಜಾರ, ಪಕ್ಷದ ವಿವಿಧ ಪದಾಧಿಕಾರಿಗಳಾದ ಡಾ. ಬಸವರಾಜ ಕೇಲಗಾರ, ಭಾರತಿ ಜಂಬಗಿ, ಎಸ್.ಎಸ್.ರಾಮಲಿಂಗಣ್ಣನವರ, ಚೋಳಪ್ಪ ಕಸವಾಳ, ಮಂಜುನಾಥ ಓಲೇಕಾರ, ಬಸವರಾಜ ಪಾಟೀಲ ಮೊದಲಾದವರು ಭಾಗವಹಿಸಿದ್ದರು.
ನಗರ ಅಧ್ಯಕ್ಷ ದೀಪಕ್ ಹರಪನಹಳ್ಳಿ ಸ್ವಾಗತಿಸಿದರು. ತಾಲ್ಲೂಕು ಅಧ್ಯಕ್ಷ ಬಸವರಾಜ ಕೇಲಗಾರ ಕಾರ್ಯಕ್ರಮ ನಿರೂಪಿಸಿದರು.