ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ

ಖಾಸಗಿ ಒಡೆತನದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಕ್ತಿಗೆ ಆಗ್ರಹ

ದಾವಣಗೆರೆ, ಅ.23- ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಪರ್ದಿಗೆ ಪಡೆದ ಖಾಸಗಿ ವೈದ್ಯಕೀಯ ಸಂಸ್ಥೆಯು ಸರಿಯಾದ ಚಿಕಿತ್ಸೆ ನೀಡದಿರುವ ಬಗ್ಗೆ ಅಸಮಾಧಾನಗೊಂಡ ಗ್ರಾಮಸ್ಥರು ಆ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸಿರುವ ಘಟನೆ ತಾಲ್ಲೂ ಕಿನ ಲೋಕಿಕೆರೆ ಗ್ರಾಮದಲ್ಲಿ ಇಂದು ನಡೆದಿದೆ.

ಗ್ರಾಮದಲ್ಲಿನ ಎರಡೂವರೆ ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ, ಎಲ್ಲ ಮೂಲ ಸೌಲಭ್ಯ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 13 ವರ್ಷಗಳ ಹಿಂದೆ ದಾವಣ ಗೆರೆಯ ಖಾಸಗಿ ವೈದ್ಯಕೀಯ ಶಿಕ್ಷಣ ಸಂಶೋ ಧನೆ ವಿದ್ಯಾಲಯ ತರಬೇತಿ ಕೇಂದ್ರ ಗುತ್ತಿಗೆ ಆಧಾರದ ಮೇಲೆ ತನ್ನ ಸುಪರ್ದಿಗೆ ಪಡೆದಿತ್ತು. ಆದರೆ ಸರಿಯಾದ ಚಿಕಿತ್ಸೆ ನೀಡದೇ ತಮ್ಮ ಆಸ್ಪತ್ರೆಗೆ ರೆಫರೆನ್ಸ್ ಮಾಡಿಕೊಡುತ್ತಿರುವುದಾಗಿ ಆರೋಪಿಸಿ ಕೇಂದ್ರದ ಮುಂದೆ ಜಮಾಯಿಸಿದ್ದ ಗ್ರಾಮಸ್ಥರು, ಖಾಸಗಿ ಆಡಳಿತದಿಂದ ಮುಕ್ತಿ ನೀಡಿ ಸರ್ಕಾರವೇ ಆಡಳಿತ ವಹಿಸಿಕೊಳ್ಳಲಿ ಎಂದು ಪಟ್ಟು ಹಿಡಿದು ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸಂಸ್ಥೆಯ ವ್ಯಾಪ್ತಿಗೆ ಈ ಕೇಂದ್ರ ವನ್ನು ಒಪ್ಪಿಸಿದರೆ ಇನ್ನೂ ಹೆಚ್ಚಿನ ಆರೋಗ್ಯ ಸೌಲಭ್ಯ ಸಿಗುತ್ತದೆ ಎಂದು ಹಲವು ಮುಖಂ ಡರು ಅನಿಸಿಕೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ 2007 ರಲ್ಲಿ ಈ ಆರೋಗ್ಯ ಕೇಂದ್ರವನ್ನು ಖಾಸಗಿ ಸಂಸ್ಥೆಗೆ ನೀಡುವ ಸರ್ಕಾರದ ಪ್ರಸ್ತಾವ ನೆಗೆ ಗ್ರಾಮ ಪಂಚಾಯತಿ ಸ್ಪಂದಿಸಿತ್ತು. ಸರ್ಕಾರದ ಅಧೀನದಲ್ಲಿದ್ದ ವೇಳೆ ಉಚಿತ ಚಿಕಿತ್ಸೆ, ಔಷಧಿ ವಿತರಣೆ, ಗರ್ಭಿಣಿಯರ ಶಸ್ತ್ರಚಿಕಿತ್ಸೆ, ಕಣ್ಣಿನ ಪೊರೆ ತಪಾಸಣೆ ಶಿಬಿರ, ಆರೋಗ್ಯ ಶಿಬಿರ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದ ಸುತ್ತ ಮುತ್ತಲಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಇದೀಗ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಣ್ಣ ಪುಟ್ಟ ಚಿಕಿತ್ಸೆಗೂ ದಾವಣಗೆರೆಯಲ್ಲಿನ ಆ ಖಾಸಗಿ ಸಂಸ್ಥೆಗೆ ಎಡತಾಕುವ ಪರಿಸ್ಥಿತಿ ಬಂತು ಎಂದು ಗ್ರಾಮದ ಮುಖಂಡ ಆನಂದ್ ಅಳಲಿಟ್ಟಿದ್ದಾರೆ.

ಆರೋಗ್ಯ ಕೇಂದ್ರವನ್ನು ಉನ್ನತೀಕರಣ ಗೊಳಿಸಿ ಹೈಟೆಕ್ ಆಸ್ಪತ್ರೆ ಮಾಡಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ಪಂಚಾಯಿತಿ ಸದಸ್ಯರೆಲ್ಲರನ್ನು ದಾರಿ ತಪ್ಪಿಸಿ ಒಂದೇ ವರ್ಷದ ಗುತ್ತಿಗೆ ಕರಾರನ್ನು ಪ್ರತಿ ವರ್ಷ ಗ್ರಾಮದ ಕೆಲವರ ನಕಲು ಸಹಿ ಮಾಡಿ ಒಪ್ಪಂದ ಪತ್ರ ಸೃಷ್ಟಿಸಿ ಕಳೆದ ಹದಿಮೂರು ವರ್ಷಗಳಿಂದ ನಿರಂತರ ಗ್ರಾಮ ಪಂಚಾಯಿತಿ ಗ್ರಾಮಸ್ಥರ ಗಮನಕ್ಕೂ ತರದೇ ಒಮ್ಮುಖವಾಗಿ ದಾಖಲೆ ಮಾಡಿಕೊಂಡು ಆಸ್ಪತ್ರೆಯ ಅಭಿವೃದ್ಧಿ ಕಡೆ ಗಮನ ಕೊಡದೆ ಖಾಸಗಿ ಸಂಸ್ಥೆಯು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಗ್ರಾಮದ ಆರೋಗ್ಯ ಕೇಂದ್ರವನ್ನು ಖಾಸಗಿ ಒಡೆತನದ ಒಪ್ಪಂದಿಂದ ಮುಕ್ತಗೊಳಿಸಿ ಸರ್ಕಾರವೇ ತನ್ನ ಸುಪರ್ದಿಗೆ ಪಡೆದು ಸೂಕ್ತ ವೈದ್ಯರು, 108 ಅಂಬ್ಯುಲೆನ್ಸ್ ಸೇವೆ ಸೇರಿದಂತೆ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮದ ಮುಖಂಡ ಪುರಂದರ ಲೋಕಿಕೆರೆ ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ರಾದ ಕೆ. ತಿಪ್ಪಣ್ಣ, ಆರ್. ರಾಮಸ್ವಾಮಿ, ಡಿ.ಕೆ. ಓಬಳೇಶ್, ಆಶ್ರಯ ಸಮಿತಿ ಸದಸ್ಯ ಬಲ್ಲೂರು  ಹನುಮಂತಪ್ಪ, ಕರಿಯಪ್ಪ, ಟಿ.ಹೆಚ್. ಮೂರ್ತಿ, ಪಿ.ಹೆಚ್. ಅಂಜಿನಪ್ಪ, ಕೋಡಿಹಳ್ಳಿ ಶಿವಣ್ಣ, ಕೋತಿ ಕುಬೇರ, ಪಿ.ಟಿ. ಆನಂದ್, ಸಿದ್ದಪ್ಪ, ವಕೀಲ  ಪ್ರದೀಪ್, ಗೋಪಾಲ ಸೇರಿದಂತೆ ಐನೂರಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!