ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮನಿರ್ಭರ್ ನಿಧಿ ಜಾರಿಗೆ

ಹರಿಹರದ ಕಾರ್ಯಕ್ರಮದಲ್ಲಿ  ಜಿಲ್ಲಾ ಯೋಜನಾ ಕೋಶದ ಅಧಿಕಾರಿ ಜಿ. ನಜ್ಮಾ

ಹರಿಹರ,ಅ.23 – ಕೋವಿಡ್-19 ಅವಧಿಯಲ್ಲಿ ತೊಂ ದರೆಗೊಳಗಾದ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮನಿರ್ಭರ್ ನಿಧಿ ಎಂಬ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯಡಿಯಲ್ಲಿ ಸಹಾಯ ಧನ ನೀಡುವುದನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಯೋಜನಾ ಕೋಶದ ಅಧಿಕಾರಿ ಜಿ. ನಜ್ಮಾ ತಿಳಿಸಿದರು. 

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬೀದಿಬದಿ ವ್ಯಾಪಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಮಾತನಾಡಿದರು. 

ಈ ಯೋಜನೆ ಸ್ಥಿತಿವಂತರಿಗೆ ಮತ್ತು ಅನುಕೂಲ ಸ್ಥರಿಗೆ ಎಂದು ತಿಳಿಯದೆ ಹಾಗೂ ಸಣ್ಣ ಮೊತ್ತವೆಂದು ಭಾವಿಸಿಕೊಂಡು ನಿರ್ಲಕ್ಷ್ಯ ಭಾವನೆ ಮಾಡದೆ ಹೂವು, ಹಣ್ಣು, ತರಕಾರಿ ವ್ಯಾಪಾರಸ್ಥರು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಬೀದಿ ಬದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿ ಕಿರು ಸಾಲ 10 ಸಾವಿರ ವರೆಗೆ ನೀಡುವುದು ಮತ್ತು ನಿಯಮಿತ ಸಾಲ ಮರು ಪಾವತಿಗೆ ಉತ್ತೇಜಿಸುವುದು ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ ನೀಡುವುದು ಹಾಗೂ ಸರಿಯಾದ ರೀತಿಯಲ್ಲಿ ಸೌಲಭ್ಯವನ್ನು ಪಡೆದುಕೊಂಡು ಸದ್ಬಳಕೆ ಮಾಡಿಕೊಂಡ ವ್ಯಕ್ತಿಗಳಿಗೆ ಬಹುಮಾನ ನೀಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.

ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದವರಿಗೆ ಶೇ 7 ರಷ್ಟು ಬಡ್ಡಿ ಸಹಾಯಧನವನ್ನು ನೇರ ನಗದು ಮೂಲಕ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಹಾಗೂ ಡಿಜಿಟಲ್ ವಹಿವಾಟು ನಡೆಸುವ ವ್ಯಾಪಾರಸ್ಥರಿಗೆ ರೂ. 50 ರಿಂದ 100 ರವರೆಗೆ ಕ್ಯಾಶ್ ಬ್ಯಾಕ್ ಸೌಲಭ್ಯ ದೊರೆಯಲಿದೆ. 

ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ, ಸಣ್ಣ ಹಣಕಾಸು, ಸಹಕಾರಿ ಬ್ಯಾಂಕ್ ಗಳು ಸೇರಿದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ಈ ಯೋಜನೆಯಡಿಯಲ್ಲಿ ಸಾಲ ನೀಡುವ ಸಂಸ್ಥೆಗಳಾಗಿವೆ. ಆದ್ದರಿಂದ ಸ್ಥಳಿಯವಾಗಿ ಜನಸಂಖ್ಯೆಗೆ ಅನುಗುಣವಾಗಿ ಶೇ. 1 ರಷ್ಟು ವ್ಯಾಪಾರಸ್ಥರಿಗೆ ಸಾಲ ನೀಡಲಾಗುತ್ತದೆ.

ನಗರದ ಜನಸಂಖ್ಯೆ 84 ಸಾವಿರದ 730 ಇದ್ದು, ಇದರಿಂದಾಗಿ ಸಾಲ ಪಡೆಯಲು 847 ವ್ಯಾಪಾರಸ್ಥರಿಗೆ ಅವಕಾಶವಿದೆ. ಆದರೆ, 776 ವ್ಯಾಪಾರಸ್ಥರು ಮಾತ್ರ ನೋಂದಣಿ ಮಾಡಿಸಿಕೊಂಡು ಸಾಲಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ 85 ವ್ಯಾಪಾರಸ್ಥರಿಗೆ ಹಣ ಮಂಜೂರಾತಿ ದೊರೆತಿದೆ. ಉಳಿದವರು ಕೂಡ ನೋಂದಣಿ ಮಾಡಿಸಿಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ದೇಶದ ಇತರೆ ರಾಜ್ಯದಲ್ಲಿ 100 ಕ್ಕೆ ನೂರರಷ್ಟು ಸದುಪಯೋಗ ಮಾಡಿಕೊಂಡಿದ್ದು, ನಮ್ಮ ಜಿಲ್ಲೆಯಲ್ಲಿ ಶೇ 32 ರಷ್ಟು ಮಾತ್ರ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮೀ ಮಾತನಾಡಿದರು. ವ್ಯಾಪಾರಸ್ಥರ ಪರವಾಗಿ ಅಮ್ಜದ್, ಮಂಜುಳಾ, ಗಿರಿರಾಜ್, ಹನುಮಂತಪ್ಪ ಮಾತನಾಡಿ, ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಜಿ.ಕೆ. ಪ್ರವೀಣ್ ಜಗದೀಶ್, ರಾಜು ಬಾಳೆಕಾಯಿ, ಅಕ್ಕಮ್ಮ, ರಾಘವೇಂದ್ರ, ಚಂದ್ರಪ್ಪ, ಅಲ್ತಾಫ್, ಚಂದ್ರಕಲಾ, ರಾಘವೇಂದ್ರ ಐರಣಿ ಮತ್ತು ಇತರರು ಹಾಜರಿದ್ದರು.

error: Content is protected !!