ದಾವಣಗೆರೆ ಅ.22 – ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಕರ್ತವ್ಯ ನಿರ್ವಹಿಸಿದಾಗ ಮಾತ್ರ ನಮ್ಮ ಹಕ್ಕು ಕೇಳಲು ಅರ್ಹರಾಗುತ್ತೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಸಂಘಟನೆ ಸಂಯುಕ್ತಾಶ್ರ ಯದಲ್ಲಿ ನಗರದ ಹಳೇ ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ ಅಭಿಯಾನ ಅಂಗವಾಗಿ ಇಂದು ಆಯೋಜಿಸಲಾಗಿದ್ದ ‘ಮೂಲಭೂತ ಕರ್ತವ್ಯಗಳು’ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರು ಇಂದು ಕೇವಲ ಹಕ್ಕುಗಳನ್ನು ಮಾತ್ರ ಕೇಳುತ್ತಿದ್ದಾರೆ. ಆದರೆ ತಮ್ಮ ಮೂಲಭೂತ ಕರ್ತವ್ಯಗಳನ್ನು ಮರೆಯುತ್ತಿದ್ದು, ಇದು ಸರಿಯಲ್ಲ. ಭಾರತ ದೇಶ ಹಲವು ಜಾತಿ, ಮತ, ಪಂಥ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಹೊಂದಿದೆ. ಈ ಹಿನ್ನೆಲೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲ ಅನಿಸ್ ಪಾಷಾ ಮಾತನಾಡಿ, ಮೂಲಭೂತ ಕರ್ತವ್ಯಗಳು ಜನಸಾಮಾನ್ಯರಿಗೆ ಅಷ್ಟೇ ಅಲ್ಲ, ಜನಪ್ರತಿನಿಧಿಗಳಿಗೂ ತಿಳಿಯಪಡಿಸಬೇಕಿದೆ. ಬಂದ್ ಸಂದರ್ಭದಲ್ಲಿ ಸಾರ್ವಜನಿಕ ಸ್ವತ್ತುಗಳನ್ನು ಯಾರೂ ನಾಶ ಮಾಡಬಾರದು. ಅವುಗಳನ್ನು ಸಂರಕ್ಷಿಸಬೇಕಾಗಿದ್ದು, ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ದೇಶವು ನಮ್ಮ ಮನೆ ಎಂದು ತಿಳಿದು ಸಾರ್ವಜನಿಕ ಸ್ವತ್ತುಗಳ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕು ಎಂದರು.
1975ರಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಸ್ವರ್ಣಸಿಂಗ್ ಆಯೋಗದ ಮೂಲಕ 51ಎ ಅನುಸೂಚಿತ 42ನೇ ತಿದ್ದುಪಡಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಜಾರಿಗೆ ತರಲಾಯಿತು. ಜೊತೆಗೆ ಪ್ರತಿಯೊಬ್ಬರಿಗೂ ಶಿಕ್ಷಣ ಲಭಿಸುವ ಸಲುವಾಗಿ 2006 ರ 86ನೇ ತಿದ್ದುಪಡಿಯಲ್ಲಿ 6 ವರ್ಷದಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಅರುಣಕುಮಾರ್ ಎಲ್.ಎಚ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ಎಲ್ಲ ಮಹನೀಯರನ್ನು ನೆನಪಿಸಿಕೊಂಡು ಗೌರವಿಸುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ. ಅಂದು ದೇಶಕ್ಕಾಗಿ ಹೋರಾಡಿ 27ನೇ ವಯಸ್ಸಿನಲ್ಲಿಯೇ ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ಕ್ರಾಂತಿಕಾರಿ ಅಶ್ಪಾಕ್ವುಲ್ಲಾ ಖಾನ್ ಅವರ ಜನ್ಮದಿನವಾಗಿದೆ ಎಂದು ಸ್ಮರಿಸಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಸ್. ಲಿಂಗರಾಜ್ ಮಾತನಾಡಿ, ನಾವೆಲ್ಲರೂ ಸಮಾಜದಲ್ಲಿ ಮೌಢ್ಯತೆ ಕಂದಾಚಾರ ತೊಡೆದು ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೀಡಿ ಕಾರ್ಮಿಕರ ಸಂಘದ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ವಕೀಲರಾದ ಕಲೀಂ, ಅಬ್ದುಲ್ ಜಬ್ಬಾರ್, ಅಬ್ದುಲ್ ಸಮದ್ ಮತ್ತಿತರರು ಇದ್ದರು.