ವಾಲ್ಮೀಕಿ ಶ್ರೀಗಳನ್ನು ಬೆಂಬಲಿಸಿ ಹರಿಹರದಲ್ಲಿ ಧರಣಿ

ಹರಿಹರ, ಅ.21- ಎಸ್ಟಿ ಸಮುದಾಯಕ್ಕೆ ಅಕ್ಟೋಬರ್ 31ರ ಒಳಗಾಗಿ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ. 7.5 ಕ್ಕೆ ಹೆಚ್ಚಿಸುವಂತೆ ಶ್ರೀ ವಾಲ್ಮೀಕಿ ಸಮಾಜದ ಶ್ರೀ ಪ್ರಸನ್ನಾನಂದ ಸ್ವಾಮಿಗಳು ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕೆ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿರುವುದರಿಂದ ಅವರನ್ನು ಬೆಂಬಲಿಸಿ, ಹರಿಹರ ತಾಲ್ಲೂಕಿನ ವಾಲ್ಮೀಕಿ ಸಮಾಜದ ಮುಖಂಡರು ನಗರದ ತಹಶೀಲ್ದಾರ್ ಕಛೇ ರಿಯ ಮುಂಭಾಗದಲ್ಲಿ ಇಂದು ಸತ್ಯಾಗ್ರಹ ನಡೆಸಿದರು.

ಈ ವೇಳೆ ವಾಲ್ಮೀಕಿ ಸಮಾಜದ ಮುಖಂಡ ಜಿಗಳಿ ಆನಂದಪ್ಪ ಮಾತನಾಡಿ, ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ್ ದಾಸ್  ಅವರು ಎಸ್ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿ ಈಗ 2 ತಿಂಗಳು ಕಳೆದಿವೆ. ಈ ವಿಚಾರದಲ್ಲಿ ನಮ್ಮ ಸಮಾಜದ ಶ್ರೀ ಪ್ರನಸ್ನಾನಂದ  ಮಹಾಸ್ವಾಮಿಗಳು ಎರಡು ಬಾರಿ  ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ಅವರನ್ನು ಭೇಟಿಯಾಗಿ ಚರ್ಚೆ ಮಾಡಿ ದ್ದಾರೆ. ಆ ಸಂದರ್ಭದಲ್ಲಿ ಅವರೂ ಕೂಡ ಮೀಸಲಾತಿ ಹೆಚ್ಚಿಸುವುದಾಗಿ ಭರವಸೆ ನೀಡಿ ದ್ದಾರೆ. ಆದರೆ, ಇದುವರೆಗೆ ಅದರ ಬಗ್ಗೆ ಮಾತ ನಾಡುವುದಕ್ಕೆ ಮುಂದಾಗಿಲ್ಲ. ನಮ್ಮ ಸಮಾಜದ ಪ್ರಭಾವಿ ವ್ಯಕ್ತಿ ಶ್ರೀರಾಮುಲು ಅವರಿಗೆ ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ಉಪಮುಖ್ಯ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿ, ನಮ್ಮ ಸಮಾಜದ ಮತಗಳನ್ನು ಗಿಟ್ಟಿಸಿ, ಈಗ ಅದನ್ನು ಮಾಡದೇ ಸಬೂಬು ಹೇಳಿಕೊಂಡು ದಿನ ಕಳೆಯುತ್ತಾ ಅಧಿಕಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಎಲ್ಲಾ ಬೆಳವಣಿಗಳಿಗೆ ಅಂತ್ಯವನ್ನು ಕಾಣಿಸಬೇಕು ಎಂದು ಹೇಳಿದರು.

ಸಮಾಜದ ಮುಖಂಡ ಮಾರುತಿ ಬೇಡರ್ ಮಾತನಾಡಿ, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರವು ಇದೇ ರೀತಿಯ ಮೊಂಡುತನ ಮತ್ತು ನಿರ್ಲಕ್ಷ್ಯ ಭಾವನೆ ಮುಂದುವರೆಸಿಕೊಂಡು ಹೋದರೆ, ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ವತಿಯಿಂದ ಅವರಿಗೆ ತಕ್ಕ ಉತ್ತರವನ್ನು ಸಮಾಜದವರು ನೀಡುತ್ತಾರೆ ಎಂದು ಎಚ್ಚರಿಸಿದರು.

ತಾಲ್ಲೂಕು ಸಮಾಜದ ಅಧ್ಯಕ್ಷ ಕೆ.ಆರ್. ರಂಗಪ್ಪ, ನಿವೃತ್ತ ಶಿಕ್ಷಕ ಪುಟ್ಟಪ್ಪ ಹಾಗು ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಪೀಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಕೆ.ಹೆಚ್. ಕೊಟ್ರಪ್ಪ ಕೊಕ್ಕನೂರು, ಬಿ. ಸೋಮಶೇಖರ್ ಕೊಕ್ಕನೂರು, ಡಿ. ದೇವೇಂದ್ರಪ್ಪ, ಜಯಣ್ಣ ಜಿಗಳಿ, ಕೃಷ್ಣಪ್ಪ, ಕೊಂಡಜ್ಜಿ ತಿಪ್ಪಣ್ಣ, ಹಿಂಡಸಘಟ್ಟ ತಿಪ್ಪೇಸ್ವಾಮಿ, ರಾಜು ಆಟೋ, ಪಾಲಾಕ್ಷಪ್ಪ ಮಕರಿ, ಕುರುಬರಹಳ್ಳಿ ಜಗ್ಗಪ್ಪ, ಬಸವರಾಜಪ್ಪ ಮೆಣಸಿನಹಾಳ, ನಾಗರಾಜ್ ಹಾಗೂ ಇತರರು ಹಾಜರಿದ್ದರು.

error: Content is protected !!