ದಾವಣಗೆರೆ, ಜು.16- ರಾಜ್ಯದ ನಿರುದ್ಯೋಗಿ ಯುವ ಜನತೆಗೆ ಮಾಸಿಕ 5 ಸಾವಿರ ನಿರುದ್ಯೋಗ ಭತ್ಯೆ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿತ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಜಿಲ್ಲಾ ಸಮಿತಿ ಪದಾಧಿಕಾರಿಗಳು ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ಪ್ರತಿಭಟಿಸಿದರು. ನಂತರ ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಲಸೆ ಕಾರ್ಮಿಕರಿಗೆ ಒಂದು ಸಮಗ್ರ ಪರಿಹಾರ ಯೋಜನೆಯನ್ನು ರೂಪಿಸಬೇಕು, ನರೇಗಾ ಕಾರ್ಮಿಕರಿಗೆ ದಿನಗೂಲಿಯನ್ನು 600ಕ್ಕೆ ಮತ್ತು ದುಡಿಮೆ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು, ಕೂಡಲೇ ಮದ್ಯ ನಿಷೇಧಿಸಬೇಕು ಮತ್ತು ಅಶ್ಲೀಲ ವೆಬ್‌ಸೈಟ್‌ಗಳನ್ನು ನಿಷೇಧಿಸಬೇಕು, ಖಾಸಗಿ ವಲಯದಲ್ಲಿ ಸಂಬಳ ಕಡಿತವನ್ನು ತಪ್ಪಿಸಬೇಕು ಹಾಗೂ ಉದ್ಯೋಗ ನಷ್ಟ ಮತ್ತು ಉದ್ಯೋಗ ಕಡಿತದಿಂದ ತಪ್ಪಿಸಲು ಕ್ರಮ ಕೈಗೊಳ್ಳಬೇಕು, ಕೃಷಿ ಕ್ಷೇತ್ರಕ್ಕೆ ಸಮಗ್ರವಾದ ಪರಿಹಾರ ಪ್ಯಾಕೇಜ್ ರೂಪಿಸಬೇಕು, ಎಲ್ಲಾ ಬೆಳೆಗಳಿಗೂ ಸೂಕ್ತ ಬೆಲೆಯನ್ನು ನಿಗದಿಪಡಿಸಬೇಕು ಮತ್ತು ಖರೀದಿಯನ್ನು ಖಾತ್ರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಧು ತೋಗಲೇರಿ, ಕಾರ್ಯದರ್ಶಿ ಪರಶುರಾಮ್, ಪ್ರಕಾಶ್, ಸಂತೋಷ್, ಲಕ್ಷ್ಮಣ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.