ನಕಲಿ ಸ್ಯಾನಿಟೈಸರ್ ತಯಾರಿಸಿ ಮಾರಾಟ: ದಾಳಿ

ದಾವಣಗೆರೆ, ಅ.17- ನಕಲಿ ಸ್ಯಾನಿಟೈಸರ್ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ನಗರದ ಕಾಸ್ಮೆಟಿಕ್ಸ್ ಅಂಗಡಿಯೊಂದರ ಮೇಲೆ ದಾಳಿ ನಡೆಸಿರುವ ಔಷಧ ನಿಯಂತ್ರಣ ಇಲಾಖೆ ತಂಡವು ಸುಮಾರು 20 ಸಾವಿರ ರೂ. ಮೌಲ್ಯದ ನಕಲಿ ಸ್ಯಾನಿಟೈಸರ್ ಹಾಗೂ ಬಾಟಲ್‍ಗಳನ್ನು ವಶಪಡಿಸಿಕೊಂಡಿದೆ.

ಕಾಯಿಪೇಟೆ ಬಸವೇಶ್ವರ ದೇವಸ್ಥಾನ ಬಳಿ ಇರುವ ಕಾಸ್ಮೋ ಸೆಂಟರ್ ಮಾರಾಟ ಮಳಿಗೆ ಮೇಲೆ ಪಾಲಿಕೆ ಆರೋಗ್ಯ ನಿರೀಕ್ಷಕರ ಮಾಹಿತಿ ಆಧರಿಸಿ ದಿಢೀರ್ ದಾಳಿ ನಡೆಸಿದ ನಗರ ಪಾಲಿಕೆ ಆರೋಗ್ಯ ನಿರೀಕ್ಷಕರು ಮತ್ತು ಔಷಧ ನಿಯಂತ್ರಣ ಇಲಾಖೆ ಸಿಬ್ಬಂದಿಗಳು, ಸುಮಾರು  200 ಮಿಲಿ ಲೀಟರ್ ಸಾಮರ್ಥ್ಯದ 200 ಬಾಟಲ್, 40 ಲೀಟರ್ ದ್ರಾವಣ ರೂಪದ ನಕಲಿ ಸ್ಯಾನಿಟೈಸರ್, ಪ್ಲಾಸ್ಟಿಕ್ ಡಬ್ಬ ಹಾಗೂ ಬಯೋಕ್ಲೀನ್ ಎಂಬ ಶೀರ್ಷಿಕೆಯ ಮುದ್ರಿತ ನಕಲು ಲೇಬಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ನಕಲಿ ಸ್ಯಾನಿಟೈಸರ್ ದ್ರಾವಣವನ್ನು 5 ಲೀಟರ್ ಸಾಮರ್ಥ್ಯದ ಕ್ಯಾನಿನಲ್ಲಿ ಬೆಂಗಳೂರಿನಿಂದ ತರಿಸಿಕೊಂಡು 500 ಎಂಎಲ್ ಹಾಗೂ 200 ಎಂಎಲ್ ಬಾಟಲ್‍ಗಳಿಗೆ ತುಂಬಿ ನಕಲಿ ಲೇಬಲ್ ಅಂಟಿಸಿ ಮಾರಾಟಕ್ಕೆ ಸಿದ್ಧಪಡಿಸುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ದಾಳಿ ಮಾಡಿದಾಗ ದಂಧೆಯ ನಿಜ ಬಣ್ಣ ಬಯಲಾಗಿದೆ. 

ರಾಜ್ಯದಲ್ಲಿ ಕೇವಲ 110 ಕಂಪನಿಗಳು ಸ್ಯಾನಿಟೈಸರ್ ಸಿದ್ಧಪಡಿಸುವ ಅನುಮತಿ ಪಡೆದಿದ್ದು, ಬಯೋಕ್ಲೀನ್ ಎಂಬ ಹೆಸರಿನ ಕಂಪನಿ ಅನುಮತಿ ಪಟ್ಟಿಯಲ್ಲಿಲ್ಲ. ಇದೇ ರೀತಿ ನಗರದಲ್ಲಿ ನಕಲಿ ಸ್ಯಾನಿಟೈಸರ್ ಮಾರಾಟಗಾರರು ಇರುವ ಬಗ್ಗೆ ದಾಳಿ ವೇಳೆ ಅಂಗಡಿಯವನು ಸತ್ಯಾಂಶ ಹೊರ ಹಾಕಿದ್ದಾನೆ ಎಂದು ಔಷಧ ಉಪ ನಿಯಂತ್ರಣಾಧಿಕಾರಿ ಉಮಾಕಾಂತ್ ಪಾಟೀಲ್ ತಿಳಿಸಿದ್ದಾರೆ.

ದಾಳಿಯಲ್ಲಿ ಸಹಾಯಕ ಔಷಧ ನಿಯಂತ್ರಣಾಧಿಕಾರಿ ತೇಜಸ್ವಿ, ಔಷಧ ನಿರೀಕ್ಷಕಿ ಗೀತಾ, ಪಾಲಿಕೆಯಿಂದ ಆರೋಗ್ಯ ಶಾಖೆ ಸಹಾಯಕ ನಿರ್ದೇಶಕ ಡಾ.ಸಂತೋಷ್, ನಿರೀಕ್ಷಕಿ ಮಧುಶ್ರೀ, ಜಯಪ್ರಕಾಶ್, ಈರೇಶ್ ಸೇರಿದಂತೆ ಇತರರು ಇದ್ದರು.

error: Content is protected !!