ದಾವಣಗೆರೆ, ಅ.14 – ಪಾಲಿಕೆ ವ್ಯಾಪ್ತಿಯ 31ನೇ ವಾರ್ಡ್‍ಗೆ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಇಂದು ಭೇಟಿ ನೀಡಿ ಸ್ಥಳೀಯ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಅವರ ಸಮ್ಮುಖದಲ್ಲಿ ನಾಗರಿಕರ ಸಮಸ್ಯೆ ಆಲಿಸಿದರು.
ವಿಪಕ್ಷ ನಾಯಕರುಗಳಿಗೆ ಸ್ಥಳೀಯ ನಾಗರಿಕರು ಸಮಸ್ಯೆಗಳನ್ನು ತಿಳಿಸಿದರು. ಎಸ್‍ಓಜಿ ಕಾಲೋನಿ ಸೇರಿದಂತೆ 31ನೇ ವಾರ್ಡ್ ಬಹುತೇಕ ಚರಂಡಿಗಳ ನೀರು ಭದ್ರಾ ಕಾಲುವೆಗೆ ಸೇರುತ್ತಿದ್ದು, ಇದರಿಂದ ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ ಎಂದು ಗಮನ ಸೆಳೆದರು.
ತಕ್ಷಣ ಸ್ಪಂದಿಸಿದ ವಿಪಕ್ಷ ಸದಸ್ಯರು ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ 31ನೇ ವಾರ್ಡಿನ ಎಲ್ಲಾ ಚರಂಡಿಗಳ ನೀರನ್ನು ಆಂಜನೇಯ ಮಿಲ್ ಬಳಿ ಇರುವ ಹಳ್ಳಕ್ಕೆ ಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಎಸ್‍ಓಜಿ ಕಾಲೋನಿ ಬಳಿಯಿರುವ ಹಿಂದೂ-ಮುಸ್ಲಿಂ-ಕ್ರೈಸ್ತ ರುದ್ರಭೂಮಿ ಅವ್ಯವಸ್ಥೆಯಿಂದ ಕೂಡಿದ್ದು, ಅಭಿವೃದ್ಧಿಗೊಳಿಸುವಂತೆ ಮೇಯರ್ ಮತ್ತು ಆಯುಕ್ತರನ್ನು ಒತ್ತಾಯಿಸಿದರು.
ಮಳೆಯಿಂದಾಗಿ ವಾರ್ಡಿನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತಿದ್ದು, ಇದನ್ನು ತಡೆಗಟ್ಟಲು ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಸಬೇಕು ಹಾಗೂ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರುಗಳಾದ ದೇವರಮನಿ ಶಿವಕುಮಾರ್, ಜಿ.ಎಸ್.ಮಂಜುನಾಥ್, ಗಣೇಶ್ ಹುಲ್ಮನಿ, ಕಲ್ಲೇಶಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುನೀತ್, ಅಭಿಯಂತರ ಮಧುಸೂದನ್ ಮತ್ತಿತರರಿದ್ದರು.