ದೇವರಬೆಳಕೆರೆ ಪಿಕಪ್ ಡ್ಯಾಂಗೆ ಬಾಗಿನ

ಮಲೇಬೆನ್ನೂರು, ಅ. 14- ದೇವರಬೆಳಕೆರೆ ಪಿಕಪ್ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ವತಿಯಿಂದ ಬಾಗಿನ ಅರ್ಪಿಸಲಾಯಿತು.

ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ ಮಾತ ನಾಡಿ, ದೇವರಬೆಳಕೆರೆ ಪಿಕಪ್ ಡ್ಯಾಂನಿಂದ ಸುಮಾರು 25 ರಿಂದ 30 ಹಳ್ಳಿಗಳ ರೈತರಿಗೆ ಅನುಕೂಲವಾಗಿದ್ದು, ರೈತರು ನೀರಿನ ಸದ್ಭಳಕೆ ಮಾಡಿಕೊಳ್ಳಬೇಕೆಂದರು.

ಮಹಾಮಂಡಳದ ನಿರ್ದೇಶಕ ಮುದೇಗೌಡ್ರ ಗಿರೀಶ್ ಮಾತನಾಡಿ, ಸುಮಾರು 650 ಎಕರೆ ವಿಸ್ತೀರ್ಣದಲ್ಲಿರುವ ಈ ಪಿಕಪ್ ಡ್ಯಾಂನಲ್ಲಿ ಸುಮಾರು ವರ್ಷಗಳಿಂದ ಹೂಳು ತುಂಬಿಕೊಂಡಿದೆ, ಹೂಳು ತೆಗೆಸುವ ಕೆಲಸವಾದರೆ ಇನ್ನೂ ಹೆಚ್ಚು ನೀರು ಸಂಗ್ರಹವಾಗಲಿದ್ದು, ಮತ್ತಷ್ಟು ರೈತರಿಗೆ ನೆರವಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದರು.

ಮಹಾಮಂಡಳದ ನಿರ್ದೇಶಕ ತೇಜಸ್ವಿ ಪಟೇಲ್ ಮಾತನಾಡಿ, ದೊಡ್ಡ ದೊಡ್ಡ ರೈತರು ತಮ್ಮ 1 ಎಕರೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು, ಮಳೆಗಾಲದಲ್ಲಿ ನೀರು ಸಂಗ್ರಹಿಸಿ ಕೊಂಡರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಮಹಾಮಂಡಳದ ನಿರ್ದೇಶಕರಾದ ಗಂಗನರಸಿ ಸಿದ್ದಪ್ಪ, ಜಿ. ಪಂಚನಗೌಡ, ಹನುಮಂತರೆಡ್ಡಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ವಾಸನದ ಮಂಜುನಾಥ್, ಯು. ವೀರನಗೌಡ, ಬಿ. ಕೆಂಚಪ್ಪ, ಕರಿಯಪ್ಪ, ಕುಣೆಬೆಳಕೆರೆ ರುದ್ರಪ್ಪ, ಕಡ್ಲೇಗೊಂದಿ ಜಯಪ್ಪ, ದೇವರಬೆಳಕೆರೆ ಕರಿಬಸಪ್ಪ, ಪತಿಯಪ್ಪರೆಡ್ಡಿ, ಈಶಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!