ಹರಿಹರ : ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಮಳಿಗೆಗಳ ನಿರ್ಮಾಣ

ಹರಿಹರ, ಅ.11- ನಗರಸಭೆಯಿಂದ ದೀನ ದಯಾಳ್ ಅಂತ್ಯೋದಯ ಯೋಜನೆ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಯಾವುದೇ ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ನಗರಸಭಾ ಪೌರಾಯುಕ್ತರಾದ ಶ್ರೀಮತಿ ಎಸ್.ಲಕ್ಷ್ಮಿ ಅವರು ಭರವಸೆ ನೀಡಿದ್ದಾರೆ.

ಮಹಾತ್ಮ ಗಾಂಧಿ ತರಕಾರಿ ಬೀದಿ ವ್ಯಾಪಾರಿಗಳ ಸಂಘದ ಸದಸ್ಯರುಗಳು ಪೌರಾಯುಕ್ತರನ್ನು ಭೇಟಿ ಮಾಡಿ, ಈಗ ನಿರ್ಮಿಸುತ್ತಿರುವ ಯೋಜನೆ ಕ್ರಮಬದ್ಧವಾಗಿಲ್ಲ. ಅದನ್ನು ಸರಿಪಡಿಸಿಕೊಡುವಂತೆ ಆಗ್ರಹಿಸಿ ಮನವಿ ನೀಡಿದಾಗ ಅದನ್ನು ಸ್ವೀಕರಿಸಿದ ನಂತರದಲ್ಲಿ ಅವರು ಮಾತನಾಡಿದರು.

ಮಳಿಗೆಗಳನ್ನು ನಿರ್ಮಾಣ ಮಾಡುವಾಗ ದೋಷಗಳು ಯಾವುದೇ ರೀತಿಯಲ್ಲಿ ಇರದಂತೆ ಜಾಗ್ರತೆ ವಹಿಸಿ, ಕಾಮಗಾರಿಯನ್ನು ನಿರ್ಮಾಣ ಮಾಡಲಾಗುವುದು. ನಿಮ್ಮ ಸಂಘದಲ್ಲಿರುವ ತರಕಾರಿ ವ್ಯಾಪಾರಿಗಳ ಪಟ್ಟಿಯನ್ನು ನಮಗೆ ನೀಡಿದರೆ, ಅದರಂತೆ ಎಲ್ಲರಿಗೂ ಸಹ ಮಳಿಗೆಗಳನ್ನು ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷರಾದ ಡಿ.ಮಂಜುಳ ಮಾತನಾಡಿ, ಹಳೆ ಟೌನ್‌ಹಾಲ್ (ಹಳೆ ಕೋರ್ಟ್) ಆವರಣದಲ್ಲಿ ದೀನ ದಯಾಳ್ ಅಂತ್ಯೋದಯ ಯೋಜನೆಯಡಿ  ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಭೂಮಿ ಪೂಜೆ ನಡೆಸಿದ ಸ್ಥಳದಲ್ಲಿ ರಸ್ತೆ ಹಾಗೂ ಇತರೆ ಸೌಕರ್ಯಗಳಿಗೆ ಜಾಗ ಸಾಕಾಗುವುದಿಲ್ಲ, ಕಿರಿದಾಗಿರುತ್ತದೆ. ಎಲ್ಲಾ ಸೌಲಭ್ಯವುಳ್ಳ ವಿಶಾಲವಾದ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಕೇವಲ 34 ಮಳಿಗೆಗಳನ್ನು ಮಾತ್ರ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ, ವ್ಯಾಪಾರಿಗಳು ಇನ್ನೂ ಹೆಚ್ಚಾಗಿರುವ ಕಾರಣದಿಂದ ಎಲ್ಲರಿಗೂ ಮಳಿಗೆ ದೊರೆಯಬೇಕು ಎಂದು  ಪೌರಾಯುಕ್ತರಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಪರಮೇಶ್, ಮಂಜುನಾಥ, ಡಿ.ರಾಘವೇಂದ್ರ, ಭೀಮವ್ವ, ಗಿರೀಶ್, ಜಯಮ್ಮ, ಮಂಜಮ್ಮ, ಕುಬೇರಪ್ಪ, ಮಹಾದೇವಮ್ಮ, ಡಿ.ರಾಧಾ ಮತ್ತಿತರರು ಹಾಜರಿದ್ದರು.

error: Content is protected !!