ಹರಪನಹಳ್ಳಿ, ಅ. 9- ಕಳೆದ ಒಂದೂವರೆ ವರ್ಷದಿಂದ ಆಡಳಿತ ಮಂಡಳಿ ಇಲ್ಲದೆ ಇದ್ದ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇದೀಗ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಪಡಿಸಿದೆ.
ಅಧ್ಯಕ್ಷ ಸ್ಥಾನ ಬಿಸಿಎ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ (ಎಸ್ಟಿ ಮಹಿಳೆ)ಗೆ ಮೀಸಲಾಗಿದೆ.
ಪಟ್ಟಣದ 27 ವಾರ್ಡ್‌ಗಳಿಗೆ ಚುನಾವಣೆ ನಡೆದಾಗ ಕಾಂಗ್ರೆಸ್ 14, ಬಿಜೆಪಿ 10, ಜೆಡಿಎಸ್ 1 ಹಾಗೂ ಪಕ್ಷೇತರರು 2 ಹೀಗೆ ಸ್ಥಾನಗಳು ಲಭಿಸಿದ್ದವು.
ಚುನಾವಣೆ ನಂತರ ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಎಂದು ಘೋಷಣೆಯಾಯಿತು. ಅದು ಬದಲಾಗಿ ಎರಡನೇ ಬಾರಿಗೆ ಸಾಮಾನ್ಯ ಮಹಿಳೆ ಎಂದು ಘೋಷಣೆಯಾಯಿತು. ಅದೂ ರದ್ದಾಗಿ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನ ಬಿಸಿಎ ಎಂದು ನಿಗದಿಯಾಗಿದೆ.
ಬಿಜೆಪಿಯಲ್ಲಿ 10 ಜನ ಸದಸ್ಯರು ಇದ್ದರೂ ಶಾಸಕ ಹಾಗೂ ಸಂಸದರ ಮತಗಳು ಸೇರಿ ಒಟ್ಟು 12 ಮತಗಳು ಆದಂತಾಗುತ್ತವೆ. ಯಾವುದೇ ಪಕ್ಷ ಅಧ್ಯಕ್ಷ ಸ್ಥಾನ ಪಡೆಯಲು 15 ಮತಗಳು ಬೇಕಾಗುತ್ತವೆ. ಆದರೆ ಯಾರ ಬಳಿಯೂ ಸ್ವಂತಕ್ಕೆ 15 ಮತಗಳಿಲ್ಲ. 14 ಮತಗಳಿರುವ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಜೋರಾಗಿದೆ.
ಜೆಡಿಎಸ್‌ನ ಷಹೀನಾಬಿ ಹಾಗೂ ಪಕ್ಷೇತರರಾದ ಅಬ್ದುಲ್ ರಹಿಮಾನ್ ಮತ್ತು ಸಿ. ಹನುಮಕ್ಕ ಈ ಮೂವರು ಅತ್ಯಂತ ನಿರ್ಣಾಯಕರಾಗುತ್ತಾರೆ. ಅಧ್ಯಕ್ಷ ಸ್ಥಾನಕ್ಕೆ 14 ಜನ ಆಕಾಂಕ್ಷಿಗಳು, ಉಪಾಧ್ಯಕ್ಷ ಸ್ಥಾನಕ್ಕೆ 4 ಜನ ಆಕಾಂಕ್ಷಿಗಳು ಇದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ತೆರೆಮರೆಯಲ್ಲಿ ಕಸರತ್ತು ಪ್ರಾರಂಭವಾಗಿದೆ.