ಜಗಳೂರು, ಅ.7- ಶೇಂಗಾ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಪ್ರತಿಭಟನೆ ನಡೆಸಿದವು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿದ ಸಂಘಟನೆ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಂತರ ತಹಶೀಲ್ದಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಸಿಎಂ ಹೊಳೆ ಚಿರಂಜೀವಿ ಮಾತನಾಡಿ, ಕೆಲವು ವರ್ಷಗಳಿಂದ ಬಿತ್ತನೆ ಬೀಜ ಗೊಬ್ಬರ, ಪೆಟ್ರೋಲ್, ಡೀಸೆಲ್, ಇತರೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇವುಗಳಿಗೆ ಮಾತ್ರ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡುತ್ತದೆ. ಆದರೆ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರೂ. 34 ಲಕ್ಷದ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾವನ್ನು ರೈತರು ಪ್ರತಿವರ್ಷ ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ತಲಾ 10 ಸಾವಿರ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಶೇಂಗಾ ಹಾಗೂ ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಿದ್ದು, ಅತಿವೃಷ್ಟಿ ಪಟ್ಟಿಯಲ್ಲಿ ಜಗಳೂರು ತಾಲ್ಲೂಕು ಸೇರ್ಪಡೆಯಾಗಿದ್ದು, ಬೆಳೆದ ಬೆಳೆಯಲ್ಲಿ ಇಳುವರಿ ಕಡಿಮೆಯಿದ್ದು, ಇವತ್ತಿನ ಮಾರುಕಟ್ಟೆಗೆ ರವಾನಿಸಿದರೆ, 1900-4000 ಸಾವಿರ ರೂ.ದವರೆಗೆ ಶೇಂಗಾ, 900-1400 ರೂ.ವರೆಗೆ ಮೆಕ್ಕೆಜೋಳಕ್ಕೆ ಬೆಲೆಯಿದೆ. ಒಂದು ಎಕರೆ ಬೆಳೆಯಲು ತಗಲುವ ವೆಚ್ಚ ಅಧಿಕವಾಗಿದ್ದು, ಆದಾಯ ಕಡಿಮೆಯಾಗಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಶೇಂಗಾಕ್ಕೆ 10 ಸಾವಿರ ರೂ. ಹಾಗೂ ಮೆಕ್ಕೆಜೋಳಕ್ಕೆ 2 ಸಾವಿರ ರೂ., ಹತ್ತಿಗೆ 10 ಸಾವಿರ ರೂ. ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಗಂಗಾಧರಪ್ಪ, ಸತೀಶ್, ಲೋಕೇಶ್, ನಾಗರಾಜ್, ಶರಣಪ್ಪ, ಪ್ರಹ್ಲಾದಪ್ಪ, ವೀರೇಶ್, ಅಜ್ಜಪ್ಪ, ಹನುಮಂತಪ್ಪ, ಮೇಘನಾಥ್, ಹೊನ್ನೂರು ಅಲಿ, ಶಾಂತಪ್ಪ, ರಂಗಜ್ಜ, ನಿಂಗಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.