ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ಹರಿಹರದಲ್ಲಿ ಕಾಂಗ್ರೆಸ್ ಪ್ರತಿಭಟನೆ
ಹರಿಹರ, ಅ. 6- ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಹಾಗೂ ಸಾಂತ್ವನ ಹೇಳುವುದಕ್ಕೆ ಹೋದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರುಗಳ ಮೇಲಿನ ಪೊಲೀಸ್ ದೌರ್ಜನ್ಯ ವನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದಿಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೆರವಣಿಗೆಯು ಶ್ರೀ ಪಕ್ಕೀರ ಸ್ವಾಮಿ ಮಠದಿಂದ ಪ್ರಾರಂಭಗೊಂಡು ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಗಾಂಧಿ ವೃತ್ತದ ಮೂಲಕ ಸಂಚರಿಸಿ, ತಹಶೀಲ್ದಾರ್ ಕಛೇರಿಗೆ ತೆರಳಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮುಖಂಡರು ಮನವಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಪಾಟೀಲ್ ಕೊಮಾರನಹಳ್ಳಿ, ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಮಹಿಳಾ ಶೋಷಣೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸಮಾನತೆಯ ಪಾಠವನ್ನು ಆಳವಾಗಿ ಕಲಿಸಬೇಕು. ತಾರತಮ್ಯ ಗಳನ್ನು ನಿರಾಕರಿಸುವ ಪಠ್ಯಕ್ರಮದ ಅವಶ್ಯಕತೆ ಇದೆ. ವಿಕೃತ ಲೈಂಗಿಕತೆ ಬಿಂಬಿಸುತ್ತಾ, ಹದಿವಯಸ್ಸಿನ ಮಕ್ಕಳನ್ನು ತಪ್ಪುದಾರಿಗೆಳೆಯುವ ಜಾಲತಾಣ, ಸಿನಿಮಾಗಳ ಮೇಲೆ ನಿರ್ಬಂಧಗಳನ್ನು ಹಾಕಬೇಕು. ಅತ್ಯಾಚಾರ, ಕೊಲೆ ನಿಯಂತ್ರಣ ಮಾಡಲು ಸರ್ಕಾರ ದಿಟ್ಟ ನಿಲುವು ತೆಗೆದುಕೊಳ್ಳುವ ನಿಟ್ಟಿನಲ್ಲಿ ದಾಪುಗಾಲು ಹಾಕಬೇಕು. ಇದರಿಂದಾಗಿ ಸರಣಿಯೋಪಾದಿಯಲ್ಲಿ ನಡೆಯುವ ಅತ್ಯಾಚಾರ ಮತ್ತು ಕೊಲೆಗಳು ನಡೆಯದಂತೆ ತಡೆಯಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ನಗರಸಭೆ ಸದಸ್ಯ ಶಂಕರ್ ಖಟಾವ್ಕರ್, ಜಿಲ್ಲಾ ಸಹಕಾರಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ ಅವರುಗಳು ಮಾತನಾಡಿ, ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ದೇಶ ತಲೆ ತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಎಂ.ಬಿ. ಅಬಿದ್ಅಲಿ, ನಗರಸಭೆ ಸದಸ್ಯರಾದ
ಎಸ್.ಎಂ. ವಸಂತ್, ಕೆ.ಜಿ. ಸಿದ್ದೇಶ್, ಕುರುಬ
ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ತಾ.ಪಂ. ಸದಸ್ಯ ಬಸವಲಿಂಗಪ್ಪ, ಎಂ.ಆರ್. ಚಂದ್ರಶೇಖರ್, ವಿಜಯ ಮಹಾಂತೇಶ್, ಭಾಗ್ಯದೇವಿ, ಗೋಣೆಪ್ಪ, ತಿಪ್ಪೇಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ವಾಮದೇವ್, ಭೋವಿಕುಮಾರ್, ಬಿ.ಜಿ.ಬಸವನಗೌಡ್ರು ಧೂಳೆಹೊಳೆ, ಎಸ್. ನಿಜಲಿಂಗಪ್ಪ ಧೂಳೆಹೊಳೆ, ಇಂಗಳಗೊಂದಿ ದುರುಗಪ್ಪ, ನಾಗಪ್ಪ, ಇಟಗಿ ಬಸವರಾಜ್ ಹಾಗೂ ಇತರರು ಹಾಜರಿದ್ದರು.
ಪಿಎಸ್ಐ ಎಸ್. ಶೈಲಾಶ್ರೀ ಮತ್ತು ಸಿಬ್ಬಂದಿಗಳು ಮುಂಜಾಗ್ರತಾ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.