ದಾವಣಗೆರೆ, ಅ. 3- ಪಾಲಿಕೆಯ ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಅವರು ತಾವು ಪ್ರತಿನಿಧಿಸುವ 24ನೇ ವಾರ್ಡನ್ನು ಸ್ವಚ್ಛ ಹಾಗೂ ಸುರಕ್ಷಿತ ವಾರ್ಡ ನ್ನಾಗಿಸಲು ಸಂಕಲ್ಪ ಅಭಿಯಾನ ಕೈಗೊಂಡಿದ್ದು, ವಾರ್ಡ್ನ ಮನೆಗಳಿಗೆ ಕಸ ಬೇರ್ಪಡಿಸಿ ಹಾಕಲು ಬಕೆಟ್ ವಿತರಿಸುವ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ಕುಮಾರ್ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಯುವ ಅವನಿ ಹಸಿರು ಪ್ರತಿಷ್ಠಾನ ಮತ್ತು ವಾರ್ಡ್ನ ಪ್ರಮುಖರ ಸಹಕಾರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಲ್ಲಿರುವ ನಿವಾಸಿಗಳಿಗೆ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಹಾಕುವಂತೆ ಅರಿವು ಮೂಡಿಸಲಾಯಿತು.
ಇದೇ ವೇಳೆ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಮಹಾತ್ಮಾ ಗಾಂಧೀಜಿ ಅವರ ಆಶಯದಂತೆ ಭಾರತ ಒಂದು ಸ್ವಚ್ಛ, ಸಮೃದ್ಧ ಹಾಗೂ ಆತ್ಮನಿರ್ಭರ ರಾಷ್ಟ್ರವಾಗಬೇಕೆಂಬ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ಪುಷ್ಟಿ ನೀಡುವ ಉದ್ದೇಶದಿಂದ ದಾವಣಗೆರೆಯನ್ನು ಸ್ವಚ್ಛ ನಗರಿಯನ್ನಾಗಿಸಲು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದಾಗಿ ತಿಳಿಸಿದರು.
ದಾವಣಗೆರೆ ಸ್ವಚ್ಛ ನಗರದ ಕನಸು ಸಾಕಾರಗೊಳ್ಳಬೇಕೆಂದರೆ ನಗರದ ಪ್ರತಿಯೊಂದು ವಾರ್ಡ್ಗಳು ಸಹ ವೈಜ್ಞಾನಿಕವಾಗಿ ಕಸ ವಿಲೇವಾರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ತಮ್ಮ ವಾರ್ಡಿನ ಮನೆ ಮನೆಗಳಿಗೂ ವೈಜ್ಞಾನಿಕವಾಗಿ ಕಸವನ್ನು ವಿಂಗಡಿಸಲು ಪ್ರಾಯೋಗಿಕವಾಗಿ ಒಟ್ಟು 300 ಮನೆಗಳನ್ನು ಗುರುತಿಸಿದ್ದು, ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಲು ಎರಡು ಬಕೆಟ್ಗಳನ್ನು ನೀಡಿ ಜಾಗೃತಿ ಮೂಡಿಸಲಾಯಿತು ಎಂದರು.
ಆಯುಕ್ತ ವಿಶ್ವನಾಥ್ ಮುದಜ್ಜಿ, ಮಾಜಿ ಮೇಯರ್ ಸುಧಾ ಜಯರುದ್ರೇಶ್, ಬಿಜೆಪಿ ಯುವ ಮುಖಂಡರಾದ ಕಲ್ಲೇಶ್, ವಾರ್ಡಿನ ಮುಖಂಡರಾದ ಪದ್ಮನಾಭ ಶೆಟ್ರು, ಜೆ. ಕಿರಣಕುಮಾರ್, ಡಾ. ಅಶ್ವಿನಿ, ಸಚಿನ್ ವೆರ್ಣೇಕರ್ ಹಾಗೂ ಇತರರು ಉಪಸ್ಥಿತರಿದ್ದರು.