ವಿಜಯನಗರ ಜಿಲ್ಲೆ ರಚನೆ ಪ್ರಕ್ರಿಯೆ ಸರ್ಕಾರದ ಮುಂದಿಲ್ಲ

ಗಾಂಧೀಜಿಯವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ರಾತ್ರಿ ತಂಗಿದ್ದ ನೆನಪಿಗಾಗಿ ಕಾಲೇಜಿನಲ್ಲಿ ಇರುವ ಗಾಂಧಿ ಮೆಮೋರಿಯಲ್ ಹಾಲ್‌ಅನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆ ಇದೆ. 

– ಕರುಣಾಕರ ರೆಡ್ಡಿ, ಶಾಸಕ

ಹರಪನಹಳ್ಳಿ, ಅ.2- ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ  ಹೊಸದಾಗಿ ವಿಜಯನಗರ ಜಿಲ್ಲೆ ರಚನೆ ಮಾಡುವ  ಯಾವ ಪ್ರಕ್ರಿಯೆಯೂ ಸರ್ಕಾರದ ಮುಂದೆ ಇಲ್ಲ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ಅವರು ಸ್ಥಳೀಯ ಸ.ಪ.ಪೂ ಕಾಲೇಜಿನ ಗಾಂಧಿ ಮೆಮೋರಿಯಲ್ ಹಾಲ್‌ನಲ್ಲಿ ಇರುವ ಮಹಾತ್ಮ ಗಾಂಧೀಜಿ ಮೂರ್ತಿಗೆ  ಗಾಂಧಿ ಜಯಂತಿ ಅಂಗವಾಗಿ ಪೂಜೆ ಸಲ್ಲಿಸಿದ  ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ವರ್ಷದ ಸಿಎಂರವರ ಟಿಪ್ಪಣಿ  ಪತ್ರವನ್ನು ಈ ವರ್ಷ ಗೊಂದಲ ಮೂಡಿಸಲು  ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ ಅಷ್ಟೆ, ವಿಜಯನಗರ ಜಿಲ್ಲೆ ರಚನೆ ಕುರಿತು ಸಚಿವ ಆನಂದ್‌ ಸಿಂಗ್ ಅವರ ವೈಯಕ್ತಿಕ ಅಭಿಪ್ರಾಯ. ಅಂತಹ ಯಾವ ಪ್ರಸ್ತಾವವೂ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹಾತ್ಮ ಗಾಂಧೀಜಿ ಯವರು ಹಿಂದೆ  ಸರ್ಕಾರಿ ಪದವಿ ಪೂರ್ವ ಕಾಲೇಜಿಲ್ಲಿ ಒಂದು ರಾತ್ರಿ ತಂಗಿದ್ದ ನೆನಪಿಗಾಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇರುವ ಗಾಂಧಿ ಮೆಮೋರಿಯಲ್ ಹಾಲ್ ಅನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸುವ ಯೋಜನೆ ಇದೆ. ಇಲ್ಲಿಯ  ಕೊಠಡಿಯೊಂದರಲ್ಲಿ ಕೃಷ್ಣ ಶಿಲೆಯಲ್ಲಿ ಏಕ ಶಿಲಾ ಮಹಾತ್ಮ ಗಾಂಧೀಜಿ ವಿಶ್ರಾಂತ ಭಂಗಿಯಲ್ಲಿ  ಕೂತಿರುವ ಮೂರ್ತಿ ಅತ್ಯಂತ ಸುಂದರವಾಗಿ ಸ್ಥಾಪನೆಯಾಗಿದ್ದು, ಪಕ್ಕದ ಕೊಠಡಿಯಲ್ಲಿ ಸುಸಜ್ಜಿತ ಗ್ರಂಥಾಲಯ, ಹೊರಾಂಗಣದಲ್ಲಿ ಉದ್ಯಾನವನ ನಿರ್ಮಿಸುವುದು ಸೇರಿದಂತೆ ಒಟ್ಟಾರೆಯಾಗಿ ಇದನ್ನು ಒಂದು ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು ಎಂದು ತಿಳಿಸಿದರು.

ಪ್ರವಾಸಿ ತಾಣವನ್ನಾಗಿ ಮಾಡಲು  ಕಲ್ಯಾಣ ಕರ್ನಾಟಕ  ಯೋಜನೆಯಲ್ಲಿ  ಸೇರಿಸಲು ಕ್ರಿಯಾ ಯೋಜನೆ ತಯಾರಿಸುವಂತೆ ಲೋಕೋಪಯೋಗಿ ಇಂಜಿನಿಯರ್ ಗೆ ಸೂಚಿಸಲಾಗಿದೆ ಎಂದು ಶಾಸಕರು ಹೇಳಿದರು.

ಹರಪನಹಳ್ಳಿ ತಾಲ್ಲೂಕಿನಲ್ಲಿ ಮಳೆಯಿಂದ 10 ಸಾವಿರ ಹೆಕ್ಟೇರ್ ಈರುಳ್ಳಿ ಹಾನಿಯಾಗಿರುವ ಕುರಿತು ಹಾಗೂ 600 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಇಲ್ಲಿ ಖಾಲಿ ಇರುವ ಕುರಿತು ಮತ್ತು ಗ್ರಾಮೀಣ ಭಾಗಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ಸು ಗಳನ್ನು ಸಮರ್ಪಕವಾಗಿ ಓಡಿಸುವ ಕುರಿತು  ಸರ್ಕಾರದ ಗಮನಕ್ಕೆ ತಂದಿರುವುದಾಗಿ ಅವರು ತಿಳಿಸಿದರು.

ವಸತಿ ಸಚಿವರ ಬಳಿ ಮಾತನಾಡಿ ಬಡವರಿಗೆ ಮನೆಗಳನ್ನು ಮಂಜೂರು ಮಾಡಿಸಿದ್ದೇನೆ, ಕಾಂಗ್ರೆಸ್ ಪಕ್ಷದವರು ನಾವು ಮಂಜೂರು ಮಾಡಿದ್ದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಪ್ರಸನ್ನಕುಮಾರ, ತಹಶೀಲ್ದಾರ್‌ ಅನಿಲ್‌ಕುಮಾರ್‌, ಡಿವೈಎಸ್ಪಿ ಮಲ್ಲೇಶ್‌ ದೊಡ್ಮನಿ , ಸಿಪಿಐ ಕೆ. ಕುಮಾರ್‌, ಪಿಎಸ್ ಐ ಪ್ರಕಾಶ್ , ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌, ನಿಟ್ಟೂರು ಸಣ್ಣ ಹಾಲಪ್ಪ,  ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾದ ಕಾರ್ಯದರ್ಶಿ ಆರ್. ಲೋಕೇಶ್, ಬಿಇಒ ವೀರಭದ್ರಯ್ಯ, ಮುಖ್ಯಾಧಿಕಾರಿ ನಾಗರಾಜನಾಯ್ಕ, ಪ್ರಾಚಾರ್ಯ ಪ್ರಸಾದ್ ಶಾಸ್ತ್ರಿ,  ಪುರಸಭೆ ಸದಸ್ಯರಾದ ಎಂ.ಕೆ. ಜಾವೀದ್ ಮಂಜುನಾಥ ಇಜಂತ್‌ಕರ್, ಎಸ್.ಕಿರಣ್‍ಕುಮಾರ್‌,   ಮುಖಂಡರಾದ ಎಂ.ಪಿ.ನಾಯ್ಕ, ಎಚ್.ಟಿ.ಗಿರೀಶಪ್ಪ,  ಯಡಿಹಳ್ಳಿ ಶೇಖರಪ್ಪ, ವಿಶ್ವನಾಥ ಶಿಂಗ್ರಿಹಳ್ಳಿ, ಬಾಗಳಿ ಕೊಟ್ರೇಶಪ್ಪ, ಕೆ.ಶಿವಾನಂದ, ನಂದಿಬೇವೂರು ರಾಜಪ್ಪ. ನೀಲಗುಂದ ತಿಮ್ಮೇಶ, ಸತ್ತೂರು ಷಣ್ಮುಖಪ್ಪ, ನಂದಿಕೇಶವ, ತಿಮ್ಮಣ್ಣ, ಎಂ.ಸಂತೋಷ, ಯು.ಪಿ.ನಾಗರಾಜ್ ಇದ್ದರು.

error: Content is protected !!