ಹರಪನಹಳ್ಳಿ, ಸೆ. 30- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ತಾಲ್ಲೂಕಿನ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಆರಂಭಿಸಿದ್ದ ಮುಷ್ಕರ ಮುಂದುವರೆದಿದೆ.
ತಾಲ್ಲೂಕಿನಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ 160 ಜನ ಸ್ಟಾಫ್ ನರ್ಸ್, ಎಎನ್‌ಎಂ, ಲ್ಯಾಬ್ ಟೆಕ್ನೀಷಿಯನ್ ಹೀಗೆ 160 ಜನ ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಕಳೆದ ಒಂದು ವಾರದಿಂದ ಕೆಲಸಕ್ಕೆ ಗೈರಾಗಿ ಮನೆಯಲ್ಲಿದ್ದು ಪ್ರತಿಭಟನೆ ನಡೆಸಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆ ರದ್ದುಗೊಳಿಸಿ ಸೇವಾ ಭದ್ರತೆ ಒದಗಿಸಬೇಕು ಮುಂತಾದ ಬೇಡಿಕೆಗ ಳನ್ನು ಸರ್ಕಾರದ ಮುಂದೆ ಇಟ್ಟು ಮುಷ್ಕರಕ್ಕೆ ಧುಮುಕಿದ್ದಾರೆ.
ನಾವು ಮುಷ್ಕರ ಆರಂಭಿಸಿದ ನಂತರ ಆರೋಗ್ಯ ಇಲಾಖೆಯಿಂದ ಕೆಲಸಕ್ಕೆ ಹಾಜರಾಗಿ, ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿ, ನಮ್ಮ ಸಂಘದ ರಾಜ್ಯ ಘಟಕದಿಂದ ನಿರ್ದೇಶನ ಬರುವವರೆಗೂ ಮುಷ್ಕರ ನಡೆಸುವುದಾಗಿ ಸ್ಪಷ್ಟಪಡಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಶಿವಕುಮಾರ್ ಅವರು ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಮುಷ್ಕರದಿಂದ ಸ್ವಲ್ಪಮಟ್ಟಿಗೆ ಸಮಸ್ಯೆಯಾಗಿದ್ದರೂ ನಿಭಾಯಿಸುತ್ತಿದ್ದೇವೆ. ಗಂಭೀರವಾದ ಸಮಸ್ಯೆಯಾಗಿಲ್ಲ. ಬಳ್ಳಾರಿ ಡಿಹೆಚ್ಓ ಅವರು ಈವರೆಗೂ ಶಿಸ್ತು ಕ್ರಮದ ಸುತ್ತೋಲೆ ಕಳುಹಿಸಿಲ್ಲ. ಅವರ ಬೇಡಿಕೆಗಳ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಮುಖಂಡರಾದ ಗೋವಿಂದರಾಜ್, ರೇಖಾ, ಸುನೀತಾ, ಮರುಳಾಕ್ಷಿ, ಶಿಲ್ಪಾ ಸೇರಿದಂತೆ ಅನೇಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.