ಮಲೇಬೆನ್ನೂರು, ಸೆ.30- ಸತತವಾಗಿ ಭರ್ತಿಯಾಗಿರುವ ಮಧ್ಯ ಕರ್ನಾಟಕದ ಜನರ ಜೀವನಾಡಿ ಭದ್ರಾ ಜಲಾಶಯಕ್ಕೆ ಭದ್ರಾ ಅಚ್ಚುಕಟ್ಟು ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ, ಕೊರೊನಾ ಮಹಾಮಾರಿಯಿಂದಾಗಿ ಈ ವರ್ಷ ರೈತರ ಅನುಪಸ್ಥಿತಿಯಲ್ಲಿ ಮಹಾಮಂಡಳದ ಪದಾಧಿ ಕಾರಿಗಳು ಮಾತ್ರ ಭದ್ರೆಗೆ ಬಾಗಿನ ಅರ್ಪಿಸಿದ್ದೇವೆ.
ಭದ್ರೆ ಪ್ರತಿವರ್ಷ ಭರ್ತಿಯಾಗಲಿ. ಅಚ್ಚುಕಟ್ಟಿನ ರೈತರ ಬದುಕು ಬಂಗಾರವಾಗಲಿ ಎಂದು ಶುಭ ಹಾರೈಸಿದರು. ನೀರು ಬಳಕೆದಾರರ ಸಹಕಾರ ಸಂಘಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಶಕ್ತಿ ನೀಡಬೇಕೆಂದು ದ್ಯಾವಪ್ಪರೆಡ್ಡಿ ಒತ್ತಾಯಿಸಿದರು.
ಮಹಾಮಂಡಳದ ಉಪಾಧ್ಯಕ್ಷ ಎ. ಶ್ರೀನಿವಾಸ್ ಮಾತನಾಡಿ, ರೈತರ ಹೊಲ ಗಾಲುವೆಗಳನ್ನು ಆಧುನೀಕರಣಗೊಳಿಸಲು ಸರ್ಕಾರ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಅನುದಾನ ನೀಡಬೇಕೆಂದರು.
ಮಹಾಮಂಡಳದ ನಿರ್ದೇಶಕರೂ ಆದ ದಾವಣಗೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮಾತನಾಡಿ,
ಅಪ್ಪರ್ ಭದ್ರಾ ಯೋಜನೆಗೆ ಭದ್ರಾ ಡ್ಯಾಂನಿಂದ ನೀರು ಹರಿಸುವ ಮೊದಲು ತುಂಗಾದಿಂದ ನೀರು ಹರಿಸುವ ಯೋಜನೆಯನ್ನು ಜಾರಿಗೊಳಿಸಬೇಕೆಂದರು.
ಮಹಾಮಂಡಳದ ನಿರ್ದೇಶಕರಾದ ಹೆಚ್. ಚಂದ್ರಪ್ಪ, ಹನುಮಂತರೆಡ್ಡಿ, ಎ.ಬಿ. ಕರಿಬಸಪ್ಪ, ಬಿ. ದೇವೇಂದ್ರಪ್ಪ, ಹೊನ್ನಾಳಿಯ ಹರೀಶ್, ಗೋಪನಾಳ್ ಬಂಧು, ಗೋಣಿವಾಡದ ಹಾಲೇಶ್, ಮಹಾಮಂಡಳದ ಸಿಇಓ ವೀರಪ್ಪ ಮತ್ತಿತರರು ಭಾಗವಹಿಸಿದ್ದರು.