ದಾವಣಗೆರೆ ಮೇ 11- ಜಿಲ್ಲಾಡಳಿತ ಭವನದಲ್ಲಿ ಮೊನ್ನೆ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಬಗ್ಗೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಏಕವಚನ ಬಳಸಿ ತಾಳ್ಮೆ ಕಳೆದು ಕೊಳ್ಳಬಾರದಿತ್ತು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಧ್ಯಕ್ಷ ಲೋಕಿಕೆರೆ ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಸಂಸದರು ಮತ್ತು ಶಾಸಕರ ಮಾತಿನ ಚಕಮಕಿಯನ್ನು ರಾಜಕೀಯಕರಣ ಗೊಳಿಸಬಾರದು. ಸಂಸದರು ಮತ್ತು ಶಾಸಕರ ನಡುವೆ ಜನರ ಹಿತಾಸಕ್ತಿಯಿಂದ ಕೂಡಿರುವ ಸಂಘರ್ಷವಾಗಿತ್ತೆಂದು ಅಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ ನಾಗರಾಜ್ ಅವರು ನಡೆದ ಘಟನೆ ಬಗ್ಗೆ ಮಾದ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.
ಮೊದಲಿನಿಂದ ಸಂಸದ ಸಿದ್ದೇಶ್ವರರ ಜೊತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ತುಂಬಾ ಸಲುಗೆಯಿಂದ ಇದ್ದವರು. ಮಾಡಾಳ್ ವಿರೂಪಾಕ್ಷಪ್ಪ ಅವರು ಶಾಸಕರಾಗಲು ಸಿದ್ದೇಶ್ವರ ಕೊಡುಗೆ ತುಂಬಾ ಇದೆ. ಸಿದ್ದೇಶ್ವರ ಅವರು ಮೂರು ದಶಕಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಜಿಲ್ಲೆಯಲ್ಲಿ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರಸಭೆ, ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ಹಾಗೂ ಆರು ಶಾಸಕರ ಗೆಲುವಿನಲ್ಲಿ ಸಂಸದರ ಪ್ರಮುಖ ಪಾತ್ರವಿದೆ ಎಂದು ನಾಗರಾಜ್ ವಿವರಿಸಿದ್ದಾರೆ.
ಬಿಜೆಪಿಯನ್ನು ಬೇರು ಮಟ್ಟದಲ್ಲಿ ಕಟ್ಟಿದ ಕೀರ್ತಿ ಸಂಸದರದ್ದು. ಶಾಸಕರ ಬೆಂಬಲಿಗರು ಸಾಮಾಜಿಕ ಜಾಲ ತಾಣಗಳಲ್ಲಿ ಸಂಸದರ ಬಗ್ಗೆ ಹಗುರವಾಗಿ ಬಿಂಬಿಸುವುದು ಸರಿಯಲ್ಲ. ಈ ಘಟನೆಯನ್ನು ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ ಎಂದು ನಾಗರಾಜ್ ತಿಳಿಸಿದ್ದಾರೆ.