ಈರುಳ್ಳಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹಿಸಿ ಈರುಳ್ಳಿ ಸುರಿದು ಪ್ರತಿಭಟನೆ

ಜಗಳೂರು, ಸೆ.15- ಈರುಳ್ಳಿ  ಬೆಲೆ ಕುಸಿದಿದ್ದು, ಕನಿಷ್ಠ ಬೆಂಬಲ ಬೆಲೆ ನಿಗದಿಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವನಹಳ್ಳಿ ಮಂಜುನಾಥ್) ಬಣದ ವತಿಯಿಂದ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತದ ಬಳಿ ಈರುಳ್ಳಿ ಸುರಿದು ನಂತರ ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಡಾ. ನಾಗವೇಣಿ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಚಿಕ್ಕ ಮಲ್ಲನ ಹೊಳೆ ಚಿರಂಜೀವಿ ಮಾತನಾಡಿ, ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ದ್ದರೂ ಸಹ ಸಮರ್ಪಕ ಕಾನೂನು ಜಾರಿಯಾ ಗದೆ, ರೈತರು ಬೀದಿಗೆ ಬಿದ್ದಿದ್ದಾರೆ. ಪ್ರಸ್ತುತ ಮಾರು ಕಟ್ಟೆ ಖರೀದಿದಾರರು ಕ್ವಿಂಟಾಲ್‌ಗೆ 200 ರೂ. ರಿಂದ 300 ರೂ. ದರದಲ್ಲಿ ಖರೀದಿಸುತ್ತಿದ್ದಾರೆ. ಸೂಕ್ತ ಬೆಂಬಲ ಬೆಲೆ ದೊರೆಯದೆ, ನಷ್ಟ ಅನುಭವಿಸುವಂತಾಗಿ ಸಾಲದ ಸುಳಿಯಲ್ಲಿ ಸಿಲುಕಿ ರೈತರು ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ.

ರೈತರ ಪರ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೂಡಲೇ ಎಂ.ಎಸ್.ಪಿ. ಕಾಯ್ದೆಯನ್ನು ಜಾರಿಗೆ ತರಬೇಕು.  ಎಂ.ಎಸ್ ಪಿ ಕಾಯ್ದೆ ಜಾರಿಗೆ ತರಲು ಮೀನಾ – ಮೇಷ ಎಣಿಸುತ್ತಿರುವ ಪರಿಣಾಮ ಖರೀದಿಗಾರರು ಮನಬಂದಂತೆ ಖರೀದಿಸುತ್ತಿದ್ದಾರೆ.

ಕಂಪನಿ ಪರವಾಗಿ ಜಾರಿಗೊಳಿಸಿರುವ ಎಪಿಎಂಸಿ ಕಾಯ್ದೆ ಕೂಡಲೇ ಹಿಂಪಡೆಯದಿದ್ದರೆ, ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲ್ಲೂಕು ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳಾದ ಎಂ.ಶರಣಪ್ಪ, ರಾಜು, ಪ್ರಹ್ಲಾದ್, ನಾಗರಾಜ್, ವೀರೇಶ್, ಗುರುಮೂರ್ತಿ, ಸುಪುತ್ರಪ್ಪ, ಅಜ್ಜಪ್ಪ, ಹನುಮಂತಪ್ಪ, ಕುಮಾರ್, ಬಸಣ್ಣ, ಚಂದ್ರಪ್ಪ, ಮೇಘನಾಥ್, ಹೊನ್ನೂರ್ ಅಲಿ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!