`ದಾವಣಗೆರೆ – ಹರಪನಹಳ್ಳಿ’ ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ

ಎಐಡಿಎಸ್ಓ ನೇತೃತ್ವದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ, ಡಿ.3- ದಾವಣಗೆರೆ ಮತ್ತು ಹರಪನಹಳ್ಳಿ ಮಾರ್ಗ ಮಧ್ಯೆ ಸಮರ್ಪಕವಾಗಿ ಸರ್ಕಾರಿ ಬಸ್‌ಗಳ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ನಗರದಲ್ಲಿಂದು ದಾವಣಗೆರೆ ಮತ್ತು ಹರಪನಹಳ್ಳಿ ಭಾಗದ ಗ್ರಾಮೀಣ ವಿದ್ಯಾರ್ಥಿಗಳು ಆಲ್ ಇಂಡಿಯಾ ಡೆಮಾಕ್ರಾಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಓ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ಕಛೇರಿ ಮುಂಭಾಗದಲ್ಲಿ ಜಮಾಯಿಸಿದ್ದ ಹಳ್ಳಿಯಿಂದ ಬರುವ ವಿದಾರ್ಥಿಗಳೆಲ್ಲಾ ಮನವಿಯನ್ನು ಡಿಪೋ ಡಿಸಿ ಅವರಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು, ವಿದಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ದಾವಣಗೆರೆ ಹಾಗೂ ಹರಪನಹಳ್ಳಿ ಮಾರ್ಗ ಮಧ್ಯೆ ಬರುವ ಗ್ರಾಮಗಳಿಂದ ನೂರಾರು ವಿದಾರ್ಥಿಗಳು ದಾವಣಗೆರೆಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ, ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳಲು ಹರಸಾಹಸ ಪಡಬೇಕಾದೆ. ಪ್ರತಿ ದಿನ ಎರಡು, ಮೂರು ತರಗತಿಗಳಿಗೆ ಹಾಜರಾಗಲು ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಅಳಲಿಟ್ಟರು.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹರಪನಹಳ್ಳಿ ಹಾಗೂ ದಾವಣಗೆರೆ ಮಾರ್ಗ ಮಧ್ಯ ಬರುವ ಎಲ್ಲಾ ಹಳ್ಳಿಗಳಿಗೆ ಬೆಳಿಗ್ಗೆ 6.30 ರಿಂದ 10 ಘಂಟೆಯವರೆಗೂ ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೂ ಅರ್ಧ ತಾಸಿಗೊಂದು ಬಸ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಎಐಡಿಎಸ್ ಓ ಜಿಲ್ಲಾಧ್ಯಕ್ಷ ಕಿರಣ, ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಕಚೇರಿ ಕಾರ್ಯದರ್ಶಿ ಕಾವ್ಯ, ಮಧುಸೂದನ್, ದರ್ಶನ್, ದಿವ್ಯ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!