ಪರಿಷತ್‌ನಲ್ಲಿ ಬಿಜೆಪಿ 14 ಸ್ಥಾನಗಳಲ್ಲಿ ಗೆಲುವು : ಸಚಿವ ಶ್ರೀರಾಮುಲು

ಹರಪನಹಳ್ಳಿ, ಡಿ. 1- ವಿಧಾನ ಪರಿಷತ್ ಚುನಾವಣೆಯ 20 ಸ್ಥಾನಗಳಲ್ಲಿ ಬಿಜೆಪಿ ಪಕ್ಷ 14 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆ ಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಗ್ರಾ.ಪಂ.ಗಳಿಗೆ ಜನಸಂಖ್ಯೆಗನುಗುಣ ವಾಗಿ ಕೇಂದ್ರ ಸರ್ಕಾರ 14 ಮತ್ತು 15ನೇ ಹಣಕಾಸು ಯೋಜನೆಯಡಿ 5 ಕೋಟಿ ವರೆಗೂ ಅನುದಾನ ನೀಡುತ್ತದೆ. ಕೋವಿಡ್‌ನಿಂದ ಉಂಟಾದ ಆರ್ಥಿಕ ಸಂಕಷ್ಟ ಸುಧಾರಿಸಿದ ನಂತರ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕೈಗೊಳ್ಳುತ್ತೇನೆ.

ಬೆಳೆ ಹಾನಿ ಪರಿಹಾರವನ್ನು 1 ಹೆಕ್ಟೇರ್‌ಗೆ 20 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಕೇಂದ್ರವನ್ನು ಒತ್ತಾಯ ಮಾಡಿದ್ದೇವೆ. ಹಗಲು-ರಾತ್ರಿ ಎನ್ನದೇ ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವ ಮೋದಿಯವರ ಬಗ್ಗೆ ವಿಪಕ್ಷದವರು ಏಕ ವಚನದಲ್ಲಿ ಮಾತನಾಡು ತ್ತಿರುವುದು ಖಂಡನೀಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಮಾತನಾಡಿ, ಕಾಂಗ್ರೆಸ್‌ನ ಕೆಲವು ಶಾಸಕರುಗಳು ದೈಹಿಕವಾಗಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿದ್ದಾರೆ. ಮಾನ ಸಿಕವಾಗಿ ಇಲ್ಲ. ಅವರ ಅಭ್ಯರ್ಥಿಯನ್ನು ಅವರೇ ಸೋಲಿಸುತ್ತಾರೆ ಎಂದು ತಿಳಿಸಿದರು.

ಶಾಸಕ ಜಿ. ಕರುಣಾಕರ ರೆಡ್ಡಿ ಮಾತ ನಾಡಿ,   ಕಾಂಗ್ರೆಸ್ ಪಕ್ಷದವರ ಆಮಿಷಕ್ಕೆ ಒಳಗಾಗದೇ ಹೆಚ್ಚು ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹನುಮಂತಪ್ಪ ಮಾತನಾಡಿದರು. ಬಿಜೆಪಿ ಅಭ್ಯರ್ಥಿ
ವೈ.ಎಂ. ಸತೀಶ್ ಮತ ಯಾಚನೆ ಮಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನ ಗೌಡ, ಡಾ. ಮಹಿಮಾ ಪಾಟೀಲ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಕಾರ್ಯದರ್ಶಿ ಆರ್. ಲೋಕೇಶ್, ತಾ.ಪಂ. ಮಾಜಿ ಉಪಾಧ್ಯಕ್ಷ ಮಂಜಾನಾಯ್ಕ, ಪುರಸಭೆ ಸದಸ್ಯರುಗಳಾದ ಹೆಚ್.ಎಂ. ಅಶೋಕ, ವಿನಾಯಕ, ಕಿರಣ್ ಶಾನಬಾಗ್, ಜಾವೇದ್, ತಾರಾ ಮಂಜುನಾಥ, ಮುಖಂಡರಾದ ಎಂ.ಪಿ. ನಾಯ್ಕ, ಬಾಗಳಿ ಕೊಟ್ರೇಶಪ್ಪ, ರಾಘವೇಂದ್ರ ಶೆಟ್ಟಿ, ಯು.ಪಿ. ನಾಗರಾಜ, ಎಂ. ಸಂತೋಷ ಕೆಂಗಳ್ಳಿ, ಪ್ರಕಾಶ್ ಉಪಸ್ಥಿತರಿದ್ದರು.

error: Content is protected !!