ಸಂವಿಧಾನ ಬದಲಿಸಿದರೆ ರಕ್ತ ಕ್ರಾಂತಿ

ದಾವಣಗೆರೆ,ನ.30- ಭಾರತದಲ್ಲಿ ಸಂವಿಧಾನ ಅಂಗೀಕರಿಸಿದ ದಿನದಿಂದ ಇಂದಿನವರೆಗೂ ದೇಶದಲ್ಲಿ ಶಾಂತಿ, ನೆಮ್ಮದಿ, ಜನರಿಗೆ ದೊರಕುತ್ತಿದ್ದರೆ ಅದು ಅಂಬೇಡ್ಕರ್ ಬರೆದ ಸಂವಿಧಾನದಿಂದ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ ಅಭಿಪ್ರಾಯ ಪಟ್ಟರು. 

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ  ಜಿಲ್ಲಾ ಕಾಂಗ್ರೆಸ್ ಇಂಟೆಕ್ ವಿಭಾಗ ಏರ್ಪಡಿಸಿದ್ದ ಸಂವಿ ಧಾನ ದಿನಾಚರಣೆ ಸಮಾರಂಭದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂವಿಧಾನ ವಿರೋಧಿ ಸರ್ಕಾರವಾಗಿದೆ. ಅವರ ಮಂತ್ರಿಯೊಬ್ಬರು ಸಂವಿಧಾನವನ್ನು ಬದಲಾಯಿಸುತ್ತೇವೆಂದು ಹೇಳಿಕೆ ನೀಡಿದಾಗ ಮೋದಿಯವರು, ಅವರನ್ನು ವಜಾ ಮಾಡಲಿಲ್ಲ. ಇದರಿಂದ ಮೋದಿ ಸರ್ಕಾರ ಸಂವಿಧಾನ ವಿರೋಧಿ ಸರ್ಕಾರವೆಂದು ರುಜುವಾತಾಗಿದೆ ಎಂದರು. 

ಇತ್ತೀಚೆಗೆ ತಾನೇ ಸಂವಿಧಾನ ವಿರೋಧಿ 3 ಕೃಷಿ ಕಾಯ್ದೆಗಳನ್ನು ತಂದು 700 ಅಮೂಲ್ಯ ರೈತರ ಬಲಿ ಪಡೆದ ಮೋದಿ ಸರ್ಕಾರ ಸಂವಿಧಾನಾತ್ಮಕವಾಗಿ ಆಡಳಿತ ನೀಡುತ್ತಿಲ್ಲವೆಂದು ಅವರು ಟೀಕಿಸಿದರು.

ಸಚಿವರು, ಬಿಜೆಪಿ ನಾಯಕರು ಪದೇ ಪದೇ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಒಂದೊಮ್ಮೆ ಸಂವಿಧಾನ ಬದಲಿಸಿದರೆ ದೇಶದಲ್ಲಿ ರಕ್ತಕ್ರಾಂತಿಯಾಗಲಿದೆ ಎಂದು ಅವರು ಎಚ್ಚರಿಸಿದರು. 

ಪಾಲಿಕೆ ಸದಸ್ಯ ಚಮನ್‍ಸಾಬ್‍ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕೆ.ಎಲ್ ಹರೀಶ್ ಬಸಾಪುರ, ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯ ಮಾತನಾಡಿದರು.  

ಪಾಲಿಕೆ ಸದಸ್ಯ ಜಾಕೀರ್ ಅಲಿ, ಜಿಲ್ಲಾ ಇಂಟಕ್ ಅಧ್ಯಕ್ಷ ಕೆ.ಎಂ. ಮಂಜುನಾಥ್, ಮುಖಂಡರಾದ ಶ್ಯಾಗಲೆ ರುದ್ರಪ್ಪ, ಆರ್.ಬಿ.ಝಡ್ ಭಾಷಾ,  ಡಿ. ಶಿವಕುಮಾರ್, ಬಿ.ಹೆಚ್. ಉದಯಕುಮಾರ್, ಗಿರಿಧರ್, ಖಾನ್‍ಸಾಬ್, ಮೊಟ್ಟೆ ದಾದಾಪೀರ್, ಅಹ್ಮದ್ ಖಾನ್, ಚಮನ್, ಸುಹೇಲ್, ದಾದು, ಜಿ.ಹೆಚ್. ನಾಗರಾಜ್, ದಾದಾಪೀರ್ ಹಾಗು ಇತರರು ಹಾಜರಿದ್ದರು. 

error: Content is protected !!