ತೋಳಹುಣಸೆಯ ತರಬೇತಿ ಕ್ಯಾಂಪಿನಲ್ಲಿ ಬ್ರಿಗೇಡಿಯರ್ ಸುನಿಲ್ ಶೆರೋನ್ ಅಭಿಮತ
ದಾವಣಗೆರೆ, ನ.23- ಎನ್.ಸಿ.ಸಿ.ಯು ಶಿಸ್ತು, ಸ್ವಾಭಿಮಾನ, ಏಕತೆ ಮೌಲ್ಯಗಳ ಸಂಕೇತ ವಾಗುವುದರ ಜೊತೆಗೆ ಯುವ ಜನತೆಯನ್ನು ದೇಶದ ಸತ್ಪ್ರಜೆಗಳಾಗಿ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬ್ರಿಗೇಡಿಯರ್ ಸುನಿಲ್ ಶೆರೋನ್ ನುಡಿದರು.
ಮುಂಬೈಯಲ್ಲಿ ನಡೆದ ಬಾಂಬ್ ದಾಳಿಯ ಕಾರ್ಯಾಚರಣೆ ಹಾಗೂ ಮಯನ್ಮಾರ್ನಲ್ಲಿ ಭಾರತ ಸೈನ್ಯ ನಡೆಸಿದ ಸರ್ಜಿಕಲ್ ದಾಳಿಯ ನೇತೃತ್ವ ವಹಿಸಿದ್ದ ಬ್ರಿಗೇಡಿಯರ್ ಸುನಿಲ್ ಶೆರೋನ್ ಅವರು ತೋಳಹುಣಸೆಯ ಬಾಪೂಜಿ ಎಸ್.ಪಿ.ಎಸ್.ಎಸ್. ಪದವಿ ಪೂರ್ವ ಕಾಲೇಜ್ ಹಾಗೂ ಎನ್.ಸಿ.ಸಿ. 33 ಕರ್ನಾಟಕ ಬೆಟಾಲಿ ಯನ್ ವತಿಯಿಂದ ಜರುಗಿದ ವಾರ್ಷಿಕ ತರ ಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಯೋಜನೆಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದ ಬ್ರಿಗೇಡಿಯರ್, ದೇಶದ ರಕ್ಷಣೆಗೆ ಸಂಬಂಧಿಸಿ ದಂತೆ ಎನ್.ಸಿ.ಸಿ ಕೆಡೆಟ್ಗಳು ಕೇಳಿದ ಪ್ರಶ್ನೆಗಳಿಗೆ ಸ್ಪೂರ್ತಿಯುತ ಉತ್ತರಗಳನ್ನು ನೀಡಿದರು.
ಸಾಧನೆಯ ಸಿದ್ಧಿಯಲ್ಲಿ ಕಾರ್ಯಕ್ಷೇತ್ರ ಮುಖ್ಯವಲ್ಲ, ಯಾವುದೇ ಕ್ಷೇತ್ರದಲ್ಲಿ ಮನಃಪೂರ್ವ ಕವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು. ವಿದ್ಯಾರ್ಥಿಗಳು ಬರೀ ಕುಟುಂಬದ ಆಸ್ತಿ ಆಗದೆ, ದೇಶದ ಆಸ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.
ದಾವಣಗೆರೆ ವಲಯದ ಬೆಟಾಲಿಯನ್ ಕಮಾಂಡರ್ ಕರ್ನಲ್ ನಿಕ್ಸನ್ ಹರ್ನಾಲ್ ಮತ್ತು ಎಸ್.ಪಿ. ಸಿ.ಬಿ. ರಿಷ್ಯಂತ್, ಕಾಲೇಜಿನ ಮುಖ್ಯಸ್ಥ ಮಂಜುನಾಥ್ ರಂಗರಾಜು, ವಿವಿಧ ಎನ್.ಸಿ.ಸಿ. ಘಟಕಗಳ ಎ.ಎನ್.ಓ.ಗಳು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಎಸ್.ಎಸ್. ಗಣೇಶ್ ಅವರ ವಿಶೇಷ ಕಾಳಜಿ ಮತ್ತು ಎನ್.ಸಿ.ಸಿ. ಸಹಕಾರದೊಂದಿಗೆ ಸುತ್ತ ಎಂಟು ಜಿಲ್ಲೆಗಳಲ್ಲಿ ಇರದ ವಿಶೇಷ ವ್ಯವಸ್ಥೆಗಳಾದ ಅಬ್ಸ್ಟಿಕಲ್ ಟ್ರೈನಿಂಗ್, ಫೈರಿಂಗ್ ರೇಂಜ್ ಇನ್ನಿತರೆ ಸುಸಜ್ಜಿತ ಅವಕಾಶಗಳನ್ನು ಕಾಲೇಜಿನಲ್ಲಿ ಕಲ್ಪಿಸಿರುವುದು ವಿಶೇಷ
ಶ್ರೀಶ್ಮಾ ಹೆಗಡೆ ಮತ್ತು ಸಿಯಾಮ್ ಅವರುಗಳು ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರಾದ ಜೆ.ಎಸ್.ವನಿತಾ ವಂದಿಸಿದರು.