ಹರಪನಹಳ್ಳಿಯಲ್ಲಿ ಕನಕ ದಾಸರ ಜಯಂತ್ಯೋತ್ಸವ
ಹರಪನಹಳ್ಳಿ, ನ.22- ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಮಾನತೆಯ ತತ್ವ ಸಾರಿದವರು, ಸಮಾಜದ ಹಲವು ಲೋಪ-ದೋಷಗಳನ್ನು ನಿವಾರಿಸಿ ಮಹಾಬೆಳಕು ಹರಿಸಿದ ದಾರ್ಶನಿಕ ದಾಸ ಶ್ರೇಷ್ಠ ಕನಕ ದಾಸರು ಎಂದು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ವೃತ್ತದಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ಆಯೋಜಿ ಸಿದ್ದ ಕನಕದಾಸರ 534 ನೇ ಜಯಂತಿಯಲ್ಲಿ ಪಾಲ್ಗೊಂಡು, ಕನಕ ದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಕನಕ ದಾಸರಂ ತಹ ಮಹಾನ್ ಶರಣರ ತತ್ವಾದರ್ಶಗಳನ್ನು ಇಂದಿನ ಯುವಕರು ಮೈಗೂಡಿಕೊಂಡು ಅವರು ಕಂಡಿರುವ ಕನಸುಗಳತ್ತಾ ಹೆಜ್ಜೆ ಇಡುತ್ತಾ ಮುಂದೆ ಸಾಗಬೇಕು ಎಂದು ತಿಳಿಸಿದರು.
ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ ಪ್ರತಿಭೆ, ಗುಣ, ನಡತೆಗಳ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಕೇ ಹೊರತು ಆತನ ಜಾತಿಯಿಂದಲ್ಲ ಎಂದು ರಾಮಧಾನ್ಯ ಚರಿತೆಯಲ್ಲಿ ಸ್ಪಷ್ಟವಾಗಿ ತಿಳಿಸಿದ ಕನಕದಾಸರು ಮನು ಕುಲವನ್ನೇ ಬದಲಾವಣೆಯತ್ತ ಕೊಂಡೊ ಯ್ಯುವ ಆದರ್ಶಗಳನ್ನು ಸಮಾಜಕ್ಕೆ ನೀಡಿದ ಮಹಾನ್ ನಾಯಕ ಎಂದು ಹೇಳಿದರು.
ಕರವೇ ತಾಲ್ಲೂಕು ಅಧ್ಯಕ್ಷ ಬಸವರಾಜ್ ಹುಲಿಯಪ್ಪನವರ್ ಮಾತನಾಡಿ, `ಕುಲ ಕುಲ ಎಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂಬ ಸಂದೇಶವನ್ನು ಇಡೀ ಮಾನವ ಕುಲಕ್ಕೆ ಸಾರಿದ ಮಹಾನ್ ಚೇತನ ಕನಕ ದಾಸರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಡಿ.ರಾಮನಮಲಿ, ಸಾಹಿತಿ ಇಸ್ಮಾಯಿಲ್ ಎಲಿಗಾರ್ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ನಂದೀಶ್ ಆಚಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಬಾಲಾಜಿ, ಪ್ರಕಾಶ್, ಭರತ್, ಕೆ. ತಿರುಮಲ, ನವೀನ್, ನಿರಂಜನ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.