ಟಿಎಂಎಇ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಸಹಕಾರಿ ಧುರೀಣ ಶೇಖರಗೌಡ ಮಾಲಿ ಪಾಟೀಲ್ ಅವರಿಗೆ ಪ್ರಶಸ್ತಿ
ಹರಿಹರ, ನ.22- ನಗರದ ಎಸ್.ಜೆ.ವಿ.ಪಿ ಕಾಲೇಜು, ಶ್ರೀ ಜಗದ್ಗುರು ಪಂಡಿತಾರಾಧ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಜೆ.ವಿ.ಪಿ ಕಾಲೇಜಿನ ಕಾರ್ಯದರ್ಶಿ ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ ತಿಳಿಸಿದ್ದಾರೆ.
ನಗರದ ಎಸ್.ಜೆ.ವಿ.ಪಿ. ಕಾಲೇಜು ಸಭಾಂಗಣದಲ್ಲಿ ನಿನ್ನೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆವರಗೊಳ್ಳದ ಶ್ರೀ ಓಂಕಾರ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋ ಜಾತ ಸ್ವಾಮೀಜಿ, ಕೋಡಿಯಾಲ ಹೊಸಪೇಟೆ ಪುಣ್ಯಕೋಟಿಮಠದ ಶ್ರೀ ಜಗದೀಶ್ವರ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ಶ್ರೀ ಈಶ್ವರ ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದಲ್ಲಿ ನಾಳೆ ದಿನಾಂಕ 23ರ ಮಂಗಳವಾರ ಬೆಳಗ್ಗೆ 8-30ಕ್ಕೆ ಶ್ರೀಶೈಲ ಡಾ. ಚೆನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮೀಜಿ ಇಷ್ಟಲಿಂಗ ಪೂಜೆ ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಯುವ ರೆಡ್ ಕ್ರಾಸ್ ವತಿಯಿಂದ ರಕ್ತದಾನ ಶಿಬಿರ, ಮಧ್ಯಾಹ್ನ 3 ಗಂಟೆಗೆ ಜಗದೀಶ್ ಗುಡುಗುಂಟಿ ಅವರಿಗೆ ಅಭಿನಂದನಾ ಸಮಾರಂಭ, 2021ನೇ ಸಾಲಿನಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದವರಿಗೆ ಶ್ರೀಶೈಲ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇದೇ ಸಂದರ್ಭದಲ್ಲಿ ಸಮನ್ವಯ ಸಿರಿ ರಾಷ್ಟ್ರೀಯ ಪ್ರಶಸ್ತಿಯನ್ನು ಹರಪನಹಳ್ಳಿಯ ಟಿ.ಎಂ.ಎ.ಇ ಸಂಸ್ಥೆಯ ಕಾರ್ಯದರ್ಶಿ ಟಿ.ಎಮ್. ಚಂದ್ರಶೇಖರಯ್ಯ, ಕೊಪ್ಪಳ ಸಹಕಾರಿ ಧುರೀಣ ಶೇಖರಗೌಡ ಮಾಲಿ ಪಾಟೀಲ್ ಅವರುಗಳಿಗೆ ಪ್ರದಾನ ಮಾಡಲಾಗುತ್ತದೆ.
ದಿವ್ಯ ಸಾನ್ನಿಧ್ಯವನ್ನು ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜವಳಿ ಉದ್ಯಮಿ ಬಿ.ಸಿ. ಉಮಾಪತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿಶ್ವನಾಥ್ ಪಿ.ಹಿರೇಮಠ, ಕಾರ್ಯನಿರ್ವಾಹಕ ನಿರ್ದೇಶಕ ಕರ್ನಾಟಕ ವಸತಿ ಶಿಕ್ಷಣ ಸಂಘ ರಮೇಶ್ ದೇಸಾಯಿ, ಮೇಜರ್ ಸಿದ್ದಲಿಂಗೇಶ್ ಹಿರೇಮಠ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತರಾದ ಎಸ್. ಲಕ್ಷ್ಮಿ, ಬಿಇಓ ಬಿ.ಸಿ. ಸಿದ್ದಪ್ಪ, ಛೇರ್ಮನ್ ರೆಡ್ ಕ್ರಾಸ್ ಸಂಸ್ಥೆ ಡಾ. ಎ.ಎಂ. ಶಿವಕುಮಾರ್ ಮತ್ತಿತರರು ಆಗಮಿಸಲಿದ್ದಾರೆ ಎಂದು ಹೇಳಿದರು.
ಎಸ್.ಜೆ.ವಿ. ಪಿ. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ ಹಾಲಸ್ವಾಮಿ ಮಾತನಾಡಿ, ಎಸ್.ಜೆ.ವಿ. ಪಿ. ಶಿಕ್ಷಣ ಸಂಸ್ಥೆಯ ಚೀಪ್ ಎಜುಕೇಷನ್ ಆಫೀಸರ್ ಆಗಿ ನಗರದ ಗಿರಿಯಮ್ಮ ಕಾಲೇಜು ನಿವೃತ್ತ ಪ್ರಾಂಶುಪಾಲರಾಗಿದ್ದ ಎಸ್.ಎಚ್. ಪ್ಯಾಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ದಿನಾಂಕ 23 ರ ಸಂಜೆ ಕಾರ್ತಿಕ ಮಹೋತ್ಸವ 6-30ಕ್ಕೆ ಸಹನ ಮೆಲೋಡಿಸ್ ರವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ಎನ್.ಎಂ.ತಿಪ್ಪೇಸ್ವಾಮಿ ನಂದಿಗಾವಿ, ಎನ್.ಹೆಚ್.ಪಾಟೀಲ್, ಕೆ.ಎಂ.ಪರಮಶಿವಯ್ಯ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ಕಾಲೇಜು ಚೀಪ್ ಎಜುಕೇಷನ್ ಆಫೀಸರ್ ಎಸ್.ಹೆಚ್.ಪ್ಯಾಟಿ, ಪಿ.ಯು. ಕಾಲೇಜು ಪ್ರಾಂಶುಪಾಲ ಕೆ.ಎಂ. ರುದ್ರಮುನಿ ಸ್ವಾಮಿ, ಮುರುಗಿ ಸ್ವಾಮಿ ಇತರರು ಹಾಜರಿದ್ದರು.