ಕಾರ್…ಕಾರ್…ಕಾರ್ ಎಲ್ನೋಡಿ ಕಾರ್ !

ದಾವಣಗೆರೆ: ಸ್ಮಾರ್ಟ್ ಸಿಟಿ ಗರಿ ಹೊತ್ತ ದಾವಣಗೆರೆಯಲ್ಲಿ ಈಗ ಕಾರುಗಳೇ ಭಾರವಾಗತೊಡಗಿವೆ. 

ಹೌದು, ದಾವಣಗೆರೆಯ ಕೆಲ ಪ್ರತಿಷ್ಠಿತ ಬಡಾವಣೆಗಳ ಕಡೆಗೊಮ್ಮೆ ಕಣ್ಣು ಹಾಯಿಸಿದರೆ ರಸ್ತೆಗಳ ಅಕ್ಕ ಪಕ್ಕ ಕಾರುಗಳ ಸಾಲು ಕಾಣುತ್ತದೆ. 

ಒಂದು ಮನೆಯಲ್ಲಿ ಒಂದು ಕಾರು ನಿಲ್ಲಿಸಲು ಮಾತ್ರ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿರುತ್ತಾರೆ ಅಥವಾ ಪಾರ್ಕಿಂಗ್ ಇರುವುದೇ ಅಲ್ಲ…! ಇದು ವಾಸ್ತವ ಸತ್ಯ.

ಇನ್ನೂ ಸೋಜಿಗದ ಸಂಗತಿ ಎಂದರೆ, ವಿದ್ಯಾವಂತ, ಶ್ರೀಮಂತ, ಮಾತೆತ್ತಿದರೆ ಕಾನೂನನ್ನು ನಾಲಿಗೆ ತುದಿಯಲ್ಲೇ ಹಿಡಿದು ಮಾತಾಡುವ ಈ ಜನ ಸೆಟ್ ಬ್ಯಾಕ್ ಬಿಡದೆ, ರಸ್ತೆಗೆ ಹೊಂದಿಕೊಂಡು ಅಥವಾ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿರುವುದು.

ಕೆಲವರು ಎರಡು ಮೂರು ಅಂತಸ್ತಿನ ಮನೆ ಕಟ್ಟಿ ಬಾಡಿಗೆ ಕೊಟ್ಟಿದ್ದಾರೆ, ದುಬಾರಿ ಬಾಡಿಗೆ ಪಡೆದು ಬರುವ ಬಹುತೇಕರು ಒಂದು ಅಥವಾ ಎರಡು ಕಾರು ಇಟ್ಟುಕೊಂಡವರೇ. ಕೆಲವರು ತಮ್ಮ ದೌಲತ್ತು ತೋರಲು ಉದ್ದನೆಯ ದುಬಾರಿ ಕಾರುಗಳನ್ನು ಇಟ್ಟಿರುವುದು ಉತ್ಪ್ರೇಕ್ಷೆಯ ಮಾತಲ್ಲ.

ಸಿದ್ಧವೀರಪ್ಪ ಬಡಾವಣೆ, ಪಿ.ಜೆ. ಬಡಾವಣೆ, ಸರಸ್ವತಿ ಬಡಾವಣೆ, ತರಳಬಾಳು ಬಡಾವಣೆ, ವಿನಾಯಕ ಬಡಾವಣೆ, ವಿದ್ಯಾನಗರ ಸೇರಿದಂತೆ ಶ್ರೀಮಂತರು, ಸರ್ಕಾರಿ ನೌಕರರು ಹೆಚ್ಚಾಗಿರುವ ಕೆಲವು ಪ್ರತಿಷ್ಠಿತ ಬಡಾವಣೆಗಳ ರಸ್ತೆಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಇಂಥವರ `ಕಾರು ಬಾರು’ ನೋಡಬಹುದು. 

ಸಂಚಾರಿ ಒತ್ತಡವಿರುವ ಈ ರಸ್ತೆಗಳಲ್ಲಿ ನಡೆಯುವ ವಿಪರ್ಯಾಸವೆಂದರೆ, ಗಂಡ ದಿಢೀರ್ ಅಂಥ ಕಾರು ನಿಲ್ಲಿಸುತ್ತಾನೆ. ಇನ್ನು ಹೆಂಡತಿ ಇಳಿದು, ತರಕಾರಿ ಮಾರುವವನ ಬಳಿ ಚೌಕಾಸಿಗೆ ಇಳಿದಿರುತ್ತಾಳೆ. ಕಾರಿನ ಹಿಂದೆ ಬಂದ ವಾಹನಗಳು ಹಾರನ್ನೋ ಹಾರನ್…

ಮನೆಯೊಳಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಂಡ ಮಾಲೀಕ ಮಹಾಶಯರು ತಮ್ಮ ಸೋಮಾರಿತನ ಪ್ರದರ್ಶಿಸುತ್ತಾ  ಹೊರಗಡೆ ರಸ್ತೆಯಲ್ಲಿಯೇ ಕಾರ್ ಪಾರ್ಕಿಂಗ್ ಮಾಡುತ್ತಾರೆ. ಜೊತೆಗೆ ಬಾಡಿಗೆದಾರರ ಕಾರುಗಳೂ ಸಹ ಮನೆಯ ಮುಂದಿನ ರಸ್ತೆಯನ್ನು ಆಕ್ರಮಿಸಿಕೊಂಡಿರುತ್ತವೆ. ಇದರಿಂದಾಗಿ ಇದೀಗ ಪ್ರತಿಷ್ಠಿತ ಬಡಾವಣೆಗಳಲ್ಲಿ ಕಾರ್ ಪಾರ್ಕಿಂಗ್ ಸಮಸ್ಯೆ ಉದ್ಭವಿಸಿದೆ.

ಇಲ್ಲಿನ ರಸ್ತೆಗಳು ದಶಕದ ಹಿಂದಿನವರೆಗೂ ನೆರೆಹೊರೆಯ, ಸ್ಥಳೀಯರ ಓಡಾಟಕ್ಕೆಂದೇ ಮೀಸಲಿದ್ದವು. ಚಿಣ್ಣರು ನಿರ್ಭೀತಿಯಿಂದ ಇವುಗಳಲ್ಲಿ ಆಡುತ್ತಾ ಕಾಲ ಕಳೆಯಬಹುದಿತ್ತು. ಆದರೆ, ಈಗ ವಸತಿ ಪ್ರದೇಶಗಳ ಬಹುತೇಕ ರಸ್ತೆಗಳು, ಹಾಗೂ ಅಕ್ಕ ಪಕ್ಕದ ಖಾಲಿ ನಿವೇಶನಗಳೂ ಸಹ ವಾಹನ ನಿಲುಗಡೆ ಪ್ರದೇಶದಂತೆ ಬಳಸಲಾಗುತ್ತಿದೆ. ಈ ರಸ್ತೆಗಳೀಗ ಅಸುರಕ್ಷಿತವಾಗಿರುವುದಷ್ಟೇ ಅಲ್ಲ, ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ ಅಥವಾ ಅಗ್ನಿಶಾಮಕ ವಾಹನ ಸಕಾಲದಲ್ಲಿ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ರಸ್ತೆಯ ಎರಡೂ ಬದಿಗಳಲ್ಲಿ ಕಾರು ನಿಲ್ಲಿಸುವುದರಿಂದ ರಸ್ತೆ ಮಧ್ಯದ ಏಳೆಂಟು ಅಡಿಯಲ್ಲಿ ಮಾತ್ರ ವಾಹನಗಳು ಸಂಚರಿಸಲು ಜಾಗ ಉಳಿದಿರುತ್ತದೆ. ಎದುರು ಬದಿಯಿಂದ ಯಾವುದಾದರೊಂದು ವಾಹನ ಬಂದರೆ ಮತ್ತೊಂದು ವಾಹನ ಪಕ್ಕಕ್ಕೆ ಸರಿಯಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿರುತ್ತದೆ. 

ಮಧ್ಯಮ ವರ್ಗದ ಬಡಾವಣೆಗಳೂ ಹೊರತಲ್ಲ: ಕೆಲವು ವರ್ಷಗಳ ಹಿಂದೆ ಶ್ರೀಮಂತರು ಮಾತ್ರ ಕಾರು ಕೊಳ್ಳಲು ಸಾಧ್ಯ ಎಂಬ ಭಾವನೆ ಇತ್ತು. ಆದರೆ ಇಂದು ಮಧ್ಯಮ ವರ್ಗದ ಮನೆಗಳ ಮುಂದೆ ಕಾರುಗಳು ನಿಂತಿರುತ್ತಿವೆ. ಕಾರು ಕೊಂಡು ಓಡಿಸುವಾಸೆ ಯಾರಿಗೆ ತಾನೇ ಇರಲ್ಲ ಹೇಳಿ?

ಪ್ರಸ್ತುತ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರ್‌ಗಳ ಬೆಲೆ 50 ಸಾವಿರ ರೂ.ಗಳಿಂದಲೇ ಆರಂಭವಾಗುತ್ತದೆ. ಇನ್ನು ಹೊಸ ಕಾರ್‌ ಖರೀದಿಸಲು ಬ್ಯಾಂಕುಗಳು ಸುಲಭ ಕಂತುಗಳನ್ನು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಅಗತ್ಯ ಇರಲಿ ಇಲ್ಲದಿರಲಿ, ಇದೀಗ ದಾವಣಗೆರೆಯಲ್ಲಿ ಕಾರು ಕೊಳ್ಳುವವರ ಸಂಖ್ಯೆ ಹೆಚ್ಚಾಗ ತೊಡಗಿದೆ. ಇದರೊಟ್ಟಿಗೆ ಪಾರ್ಕಿಂಗ್ ಸಮಸ್ಯೆಯೂ ತಲೆ ದೋರಲಾರಂಭಿಸಿದೆ.

ಕಾರುಗಳ ಸಂಖ್ಯೆಯಲ್ಲಿ ಹೆಚ್ಚಳ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂದೂ ವರೆ ವರ್ಷದಿಂದ ನಗರದಲ್ಲಿ ಕಾರುಗಳ ಸಂಖ್ಯೆ ಹೆಚ್ಚಾಗಿದೆ.  ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಲಾಕ್‌ಡೌನ್‌ ಕಾರಣದಿಂದ `ವರ್ಕ್ ಫ್ರಂ ಹೋಂ’ ನೆಪದಲ್ಲಿ  ನಗರದಲ್ಲಿಯೇ ಹಲವು ತಿಂಗಳುಗಳಿಂದ ವಾಸವಾಗಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಇವರು ಉಪಯೋಗಿಸುತ್ತಿದ್ದ ಕಾರುಗಳು ಇದೀಗ ದಾವಣಗೆರೆಯಲ್ಲೂ ಓಡಾಡುತ್ತಿವೆ.

ತಮ್ಮಲ್ಲಿದ್ದ ಕಾರುಗಳನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಓಲಾ, ಊಬರ್ ಸೇರಿದಂತೆ ಟ್ಯಾಕ್ಸಿ ಸಂಸ್ಥೆಗಳಲ್ಲಿ ಬಾಡಿಗೆ ಓಡಿಸುತ್ತಿದ್ದರು. ಹಾಗೂ ಬಾಡಿಗೆಗೆ ನೀಡಿದ್ದ ಕೆಲ ವರ್ಗದವರೂ ಸಹ ಕೊರೊನಾದಿಂದ ಸದ್ಯ ಅಷ್ಟಾಗಿ ಅಲ್ಲಿ ದುಡಿಮೆ ಇಲ್ಲದ ಕಾರಣ ಆ ವಾಹನಗಳೂ ನಗರಕ್ಕೆ ಹಿಂತಿರುಗಿವೆ ಎನ್ನಲಾಗುತ್ತಿದೆ.

ಒಟ್ಟಾರೆ ವಸತಿ ಪ್ರದೇಶದ ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲು ಸದ್ಯಕ್ಕೆ ಯಾವುದೇ ನಿಯಮಗಳಿಲ್ಲ. ಆಸ್ತಿ ಮಾಲೀಕರು ತಮ್ಮ ಜಾಗದಲ್ಲೇ ವಾಹನ ನಿಲುಗಡೆಗೆ ಅಗತ್ಯವಿರುವಷ್ಟು ಜಾಗವನ್ನೂ ಮೀಸಲಿಡುವುದು  ಕಡ್ಡಾಯ. ಆದರೂ ಇದರ ಪಾಲನೆ ಆಗದಿರುವುದು ಸಮಸ್ಯೆ ಸೃಷ್ಟಿಸಿದೆ. 

ಹಾಗಾಗಿ ರಸ್ತೆಯಲ್ಲೇ ವಾಹನ ನಿಲ್ಲಿಸುವ ಪರಿಪಾಠಕ್ಕೆ ಇಂದಲ್ಲದಿದ್ದರೆ ನಾಳೆಯಾದರೂ ಇತಿಶ್ರಿ ಹಾಡಬೇಕಿದೆ. ಈ ರಸ್ತೆಗಳನ್ನು ಸಾರ್ವಜನಿಕ ಉದ್ದೇಶಕ್ಕೆಂದು ಮೀಸಲಿಡಬೇಕಿದೆ. ವಾಹನ ನಿಲ್ಲಿಸಲು ರಸ್ತೆಯನ್ನು ಕಬಳಿಸುವವರು ಇದಕ್ಕೆ ಬೆಲೆ ತೆರಲೇ ಬೇಕು.

ಬೆಂಗಳೂರಿನ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಅಂತಿಮಗೊಳಿಸಿರುವ `ವಾಹನ ನಿಲುಗಡೆ ನೀತಿ 2.0’ಯಲ್ಲಿ ನಗರದ ನಿವಾಸಿಗಳು ಮನೆ ಬಳಿಯ ರಸ್ತೆಯನ್ನು ತಮ್ಮ ವಾಹನ ನಿಲ್ಲಿಸಲು ಬಳಸಿಕೊಂಡರೆ ಅದಕ್ಕೆ ಶುಲ್ಕ ಪಾವತಿಸಬೇಕು ಎಂಬ ಅಂಶ ಚರ್ಚೆಗೂ ಗ್ರಾಸವಾಗಿತ್ತು.  ಮನೆಯ ರಸ್ತೆ ಮುಂದೆ ಬಂದುಹೋ ಗುವ ವಾಹನಗಳಿಗೆ ತೊಂದರೆಯಾಗದಂತೆ  ಕಾರ್ ಪಾರ್ಕ್ ಮಾಡಿದರೆ ದಂಡ ವಿಧಿಸುವುದು ಸೂಕ್ತ. 

ಮುಂಬರುವ ದಿನಗಳಲ್ಲಿ ಪಾರ್ಕಿಂಗ್‌ಗೆ ಸ್ಥಳವಿದ್ದರೆ ಮಾತ್ರ ವಾಹನ ಖರೀದಿಸಲು ಷರತ್ತು ವಿಧಿಸುವ  ಹೊಸ ನೀತಿ-ನಿಯಮಗಳು ಜಾರಿಗೊಳಿಸಬೇಕು. ಇದರಿಂದ  ಕಾರುಕೊಳ್ಳುವ ಜನ ಎಚ್ಚೆತ್ತುಕೊಳ್ಳಬಹುದು.

ಅಲ್ಲದೆ, ನಗರಪಾಲಿಕೆ, ಅಭಿವೃದ್ಧಿ ಪ್ರಾಧಿಕಾರ ಪಾರ್ಕಿಂಗ್ ನಿಯಮದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ.  ಈ ವಿಚಾರದಲ್ಲಿ ಈವರೆಗೆ ದಾವಣಗೆರೆ ಅಭಿವೃದ್ಧಿ ಪ್ರಾಧಿಕಾರ, ಮಹಾ ನಗರಪಾಲಿಕೆಗಳು ಲೋಪ ಎಸಗಿವೆ ಎನ್ನದೇ ವಿಧಿಯಿಲ್ಲ. ಈ ಎರಡೂ ಸಂಸ್ಥೆಗಳು ಪ್ರತಿಷ್ಠಿತರು ವಾಸಮಾಡುವ ಬಡಾವಣೆ ಜನತೆಯ `ಕಾರು ಬಾರ’ನ್ನು  ಜಂಟಿಯಾಗಿ ಒಮ್ಮೆ ಕಣ್ಣಾಯಿಸಿ ಬಂದು ಕ್ರಮ ಜರುಗಿಸಲಿ.


– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, [email protected]

error: Content is protected !!