ಮಲೇಬೆನ್ನೂರು, ಆ.19- ಎಕ್ಕೆಗೊಂದಿ ಕ್ರಾಸ್ ನಿಂದ ಭಾನುವಳ್ಳಿ ವರೆಗಿನ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ರಸ್ತೆಯಲ್ಲಿ ನಾಟಿ ಮಾಡಿ ಪ್ರತಿಭಟನೆ ಮಾಡಿದ ಘಟನೆ ಇಂದು ನಡೆದಿದೆ.
ಭಾನುವಳ್ಳಿ ರೈತ ಸಂಘದ ಕಾರ್ಯಕರ್ತರು ಕೆಸರುಮಯವಾದ ರಸ್ತೆಯಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಭಾನುವಳ್ಳಿ ಗ್ರಾಮ ಘಟಕದ ಅಧ್ಯಕ್ಷ ಎನ್. ಪ್ರಕಾಶ್, ಇದುವರೆಗೆ ಜಿಲ್ಲಾ ಪ್ರಮುಖ ರಸ್ತೆಯಾಗಿದ್ದ ಎಕ್ಕೆಗೊಂದಿ ಕ್ರಾಸ್-ನಂದಿಗುಡಿ ರಸ್ತೆ ಇದೀಗ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಶ್ರೀ ಕ್ಷೇತ್ರ ಉಕ್ಕಡಗಾತ್ರಿ ಮತ್ತು ನಂದಿಗುಡಿ ಮಠಕ್ಕೆ ರಾಜ್ಯದ ನಾನಾ ಭಾಗಗಳಿಂದ ನಿತ್ಯ ಸಾವಿರಾರು ಜನ ಬಂದು ಹೋಗುವ ಈ ರಸ್ತೆ ಕಳೆದ 10 ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದೆ. ಕೇವಲ 3 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸದ ಸರ್ಕಾರಕ್ಕೆ ನಮ್ಮ ಧಿಕ್ಕಾರವಿರಲಿ ಎಂದರು.
ನಾವು ಈ ರೀತಿ ಪ್ರತಿಭಟನೆ ಮಾಡಿದಾಗ ಗುಂಡಿಗಳಿಗೆ ಮಣ್ಣು ಹಾಕುತ್ತಾರೆ. ಕೆಲವು ದಿನಗಳ ನಂತರ ಮತ್ತೆ ಗುಂಡಿ ಬೀಳುತ್ತದೆ. ಬೇಸಿಗೆ ಸಮಯದಲ್ಲಿ ಈ ರಸ್ತೆಯಲ್ಲಿ ಧೂಳು ಬಂದರೆ, ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗುತ್ತದೆ.
ಹಾವೇರಿ ಜಿಲ್ಲೆಯ ಸಂಪರ್ಕವನ್ನು ಹೊಂದಿರುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಎಂದರೆ ಕಾಂಗ್ರೆಸ್ ನವರು ಬಿಜೆಪಿಯವರ ಮೇಲೆ ಹೇಳುತ್ತಾರೆ. ಬಿಜೆಪಿ ಯವರು ಶಾಸಕರ ಮೇಲೆ ಹೇಳುತ್ತಾ ಕಾಲ ಕಳೆಯುತ್ತಿ ದ್ದಾರೆ ಎಂದು ರೈತ ಸಂಘದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು. ಮಾರುತಿ, ಜಬೀವುಲ್ಲಾ, ಹುಲ್ಮನಿ ಸಿದ್ದಪ್ಪ, ನಾಗರಾಜ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.