ಸದಾಶಿವ ಆಯೋಗದ ವರದಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ : ಎ. ನಾರಾಯಣಸ್ವಾಮಿ

ಹರಿಹರ, ಆ.19- ದಲಿತ ಸಮುದಾಯದ ಜನರ ಒಳಿತಿಗಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಸರ್ಕಾರಕ್ಕೆ ಒತ್ತಡ ಹಾಕುವುದಾಗಿ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.

ನಗರದ ಹೊರವಲಯದ ಬೈಪಾಸ್ ಬಳಿ ಇರುವ ಪ್ರೊಫೆಸರ್ ಬಿ. ಕೃಷ್ಣಪ್ಪ ನವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ, ನಂತರ ಅವರು ಮಾತನಾಡಿದರು.

ದಲಿತ ಸಮುದಾಯದಲ್ಲಿ ಬಹಳ ಜನರು ಬಡವರು ಇದ್ದು, ಅವರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹೆಚ್ಚು ಹಿಂದುಳಿದಿರುವುದರಿಂದ ದಲಿತ ಸಮು ದಾಯದ ಜನರು ಆರ್ಥಿಕವಾಗಿ ಸಬಲರಾಗಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ತರಬೇಕಾಗಿದೆ. ಅದಕ್ಕೆ ನಾನು ಸಮುದಾಯದ ಪರವಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ, ಸಮಾಜದ ಜನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುವುದಾಗಿ ಹೇಳಿದರು.

ಸಮಾಜದ ಮುಖಂಡ ಹೆಚ್. ನಿಜಗುಣ ಮಾತನಾಡಿ, ದಲಿತ ಸಮಾಜವು ಆರ್ಥಿಕ ವಾಗಿ ಹಿಂದುಳಿದಿದೆ. ಅವರನ್ನು ಮೇಲೆ ತರುವುದಕ್ಕೆ ಸಮಾಜದ ಸಚಿವ ಎ. ನಾರಾಯಣಸ್ವಾಮಿ ಅವರು ಸರ್ಕಾರದ ಮೇಲೆ ಪ್ರಭಾವ ಬೀರಿ, ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಹಾಗೂ ಸಮುದಾಯದ ಜನರನ್ನು ಮೇಲೆ ತರುವಂತಹ ಕೆಲಸವನ್ನು ಮಾಡಬೇಕೆಂದು ಮನವಿ ಮಾಡಿದರು.

ಸಚಿವರು ಶ್ರೀಗಳ ಆಶೀರ್ವಾದ ಪಡೆದುಕೊಂಡು ನಂತರ ತೆರಳಿದರು. ಈ ಸಂದರ್ಭದಲ್ಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಮಾಜಿ ಎಂಎಲ್‌ಸಿ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ , ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ನಗರಸಭೆ ಸದಸ್ಯರಾದ ಹನುಮಂತಪ್ಪ, ರಜನಿಕಾಂತ್, ಸುರೇಶ್ ತೆರದಾಳ, ವಿರೂಪಾಕ್ಷ ,  ಸಮಾಜದ ಮುಖಂಡರಾದ ಬಿ.ಎನ್. ರಮೇಶ್, ಮಲ್ಲೇಶ್, ಹನುಮಂತಪ್ಪ, ಕೇಶವ, ಹೆಚ್. ಸದಾಶಿವ,  ಶಿವಪ್ಪ ಇನ್ನಿತರರಿದ್ದರು.

error: Content is protected !!