ಕಸಾಪ ಅಧ್ಯಕ್ಷರು ಗಡಿ ಕನ್ನಡಿಗರ ರಕ್ಷಣೆಗೆ ಮುಂದಾಗಿಲ್ಲ

ಹರಪನಹಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ

ಹರಪನಹಳ್ಳಿ, ಮಾ.29- ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ಯುವ ಜನಾಂಗದ ಪ್ರತಿಭೆಗಳು ಗುರುತಿಸಿಕೊಳ್ಳಲು ಯುವಕರಿಗೆ ಆದ್ಯತೆ ನೀಡಿ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪರಿಷತ್ ಸದಸ್ಯರಿಗೆ ಹಾಗೂ ಪತ್ರಕರ್ತರಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು, ಪ್ರಶಸ್ತಿಗಳ ಲಾಬಿಗೆ ಕಡಿವಾಣ, ರಾಜಕೀಯದಿಂದ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡಲು ಶ್ರಮಿಸುತ್ತೇನೆ. ಜಿಲ್ಲೆಯ ಕಸಾಪಕ್ಕೆ ವಿಶೇಷ ಕಾರ್ಯದರ್ಶಿ ನೇಮಕ ಹಾಗೂ ಜಿಲ್ಲಾಧ್ಯಕ್ಷರ ಸ್ಥಾನಮಾನವನ್ನು ಕಲ್ಪಿಸಲು ಭರವಸೆ ನೀಡುತ್ತೇನೆ. ಪ್ರಥಮ ಬಾರಿ ಕಸಾಪ ಬಳ್ಳಾರಿ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ, ತಾಲ್ಲೂಕಿನ ಕಸಾಪ ಸದಸ್ಯರು ಮತ ನೀಡಬೇಕು ಎಂದು ಮನವಿ ಮಾಡಿದರು.

ಇಲ್ಲಿಯವರೆಗೂ ಸಾಹಿತ್ಯ ಪರಿಷತ್‌ಗೆ ಒಂದೇ ಕೋಮಿಗೆ ಸೇರಿದ ಅಧ್ಯಕ್ಷರು ಆಯ್ಕೆಯಾಗುತ್ತಿದ್ದಾರೆ. ಗಡಿಯಲ್ಲಿ ಎಂಇಎಸ್ ಪುಂಡಾಟಿಕೆ ಮಾಡುತ್ತಿದ್ದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಮುಂದಾಗಿಲ್ಲ. ಕನ್ನಡ ನಾಡು, ನುಡಿ, ಜಲ, ಭಾಷೆ ರಕ್ಷಣೆ ಮಾಡದವರು ಸಾಹಿತ್ಯ ಪರಿಷತ್‍ಗೆ ಏಕೆ ಬೇಕು. ಗಡಿ ಭಾಗದಲ್ಲಿ ಪರಿಷತ್ತಿನ ಸದಸ್ಯತ್ವ ವೃದ್ಧಿಸಲು ಪ್ರಯತ್ನಿಸುವೆ ಎಂದರು.

ಮುಖಂಡರಾದ ತೆಲಗಿ ಟಿ. ಮಂಜುನಾಥ, ಇರ್ಫಾನ್, ಮುದುಗಲ್, ಅಲಗಿಲವಾಡ ವಿಶ್ವನಾಥ, ಡಾ.ಬಿ.ಹೆಚ್. ಜಯಕುಮಾರ, ವೀರೇಶ್, ಜೀಶಾನ್ ಹ್ಯಾರಿಸ್ ಇನ್ನಿತರರಿದ್ದರು.

error: Content is protected !!