ದಾವಣಗೆರೆ ಮಾ. 26 – ರೈತ ವಿರೋಧಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಉಪ ವಿಭಾಗಾಧಿಕಾರಿ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಭಾರತ್ ಬಂದ್ ಬೆಂಬಲಿಸುವ ಜೊತೆಗೆ ರಾಷ್ಟ್ರಮಟ್ಟದ ರೈತ ನಾಯಕ ರಾಕೇಶ್ ಟಿಕಾಯತ್ ಮೇಲಿನ ಕೇಸನ್ನು ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ವಿದ್ಯುತ್ ಮಸೂದೆ-2020ನ್ನು ವಾಪಾಸ್ ಪಡೆಯಬೇಕು ಹಾಗೂ ಕೃಷಿ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್ ವರದಿ ಅನ್ವಯ ಕನಿಷ್ಟ ಬೆಂಬಲ ಬೆಲೆ ಖಾತರಿ ಮಾಡುವ ಕಾನೂನು ರಚಿಸುವಂತೆ ಆಗ್ರಹಿಸಿ, ದೆಹಲಿಯಲ್ಲಿ ನಾಲ್ಕು ತಿಂಗಳಿಗೂ ಮೀರಿ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ ನಿಲ್ಲಿಸುವಂತೆ ಮನವಿ ಮಾಡಿದರು.
ದೆಹಲಿಯ ಶಾಂತಿಯುತ ಹೋರಾಟಕ್ಕೆ ಕೇಂದ್ರ ಸರ್ಕಾರ ಪ್ರಜಾತಾಂತ್ರಿಕವಾಗಿ ಸ್ಪಂದಿಸದೇ ಇದ್ದಾಗ ದೇಶವ್ಯಾಪಿ ರೈತ ಚಳವಳಿ ತೀವ್ರಗೊಳಿಸಲು ಬೃಹತ್ ಸಭೆಗಳನ್ನು ರೈತ ಸಂಘಟನೆಗಳವರು ಏರ್ಪಡಿಸುತ್ತೇವೆ. ಇದರ ಭಾಗವಾಗಿ ಶಿವಮೊಗ್ಗದಲ್ಲಿ ಕೂಡ ಸಭೆ ನಡೆದಾಗ ಪೊಲೀಸರು ರಾಕೇಶ್ ಟಿಕಾಯತ್ ಮೇಲೆ ಪ್ರಚೋದನಾಕಾರಿ ಭಾಷಣದ ದೂರು ದಾಖಲಿಸಿರುವುದು ಅತ್ಯಂತ ಖಂಡನೀಯ. ಇದು ಸರ್ಕಾರದ ಪ್ರಜಾತಾಂತ್ರಿಕ ಹೋರಾಟವನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಕೂಡಲೇ ರಾಕೇಶ್ ಟಿಕಾಯತ್ ಮೇಲಿನ ಮೊಕದ್ದಮೆಗಳನ್ನು ಕೈಬಿಡುವಂತೆ ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರೈತ ಮುಖಂಡರೂ, ವಿವಿಧ ಸಂಘಟನೆಗಳ ಮುಖಂಡರೂ ಆದ ತೇಜಸ್ವಿ ಪಟೇಲ್, ಅನಿಸ್ ಪಾಷ, ಸತೀಶ್ ಅರವಿಂದ್, ತಿಪ್ಪೇಸ್ವಾಮಿ ಅಣಬೇರು ಮತ್ತಿತರರಿದ್ದರು.