ಹರಪನಹಳ್ಳಿ, ಮಾ.26- ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ತಿದ್ದುಪಡಿಗಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ, ಜನಶಕ್ತಿ ರೈತ ಸಂಘಟನೆಗಳು ಹಾಗೂ ವಿವಿಧ ಪ್ರಗತಿ ಪರ ಸಂಘಟನೆಗಳು ಕರೆ ನೀಡಿದ್ದ ಇಂದಿನ ಸ್ವಯಂ ಪ್ರೇರಿತ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಔಷಧಿ ಅಂಗಡಿಗಳು, ಸರ್ಕಾರಿ ಕಚೇರಿಗಳು, ಸರ್ಕಾರಿ ಬಸ್, ಖಾಸಗಿ ವಾಹನಗಳ ಓಡಾಟ ಸಾಮಾನ್ಯದಂತಿದ್ದರೆ, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಕೆಪಿಆರ್ಎಸ್ನ ಹುಲಿಕಟ್ಟೆ ರಾಜಪ್ಪ ಮಾತನಾಡಿ, ಕೇಂದ್ರ ಸರ್ಕಾರದ ರೈತ ಹಾಗೂ ಕೃಷಿ ಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿ ಮತ್ತು ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್ಗಳನ್ನು ಕೂಡಲೇ ವಾಪಾಸ್ ಪಡೆಯಬೇಕು. ಕರ್ನಾಟಕ ಸರ್ಕಾರ ಈಚೆಗೆ ಘೋಷಿಸಿರುವ ಕೃಷಿ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ, ಇನ್ನಿತರೆ ಸುಗ್ರೀವಾಜ್ಞೆಗಳನ್ನು ವಾಪಾಸ್ ಪಡೆಯಬೇಕು ಹಾಗೂ ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಿ.ಪಿ.ಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಇಡೀ ದೇಶ ಕೋವಿಡ್-19 ರಿಂದ ತೀವ್ರವಾಗಿ ಬಾಧಿತವಾಗಿರುವಾಗ, ಇದರ ಕುರಿತು ಗಮನ ಹರಿಸಿ ಜನತೆಯನ್ನು ರಕ್ಷಿಸುವ ಬದಲು ಇಷ್ಟೊಂದು ಅವಸರವಾಗಿ ಮತ್ತು ಬಲವಂತವಾಗಿ, ಪಾರ್ಲಿಮೆಂಟ್ ನೀತಿಗಳನ್ನು ಉಲ್ಲಂಘಿಸಿ, ಈ ಬಿಲ್ಗಳನ್ನು ದೇಶದ ಮೇಲೆ ಹೇರುವ ಅವಶ್ಯಕತೆ ಯಾದರೂ ಏನಿತ್ತು ? ಇದೊಂದು ಸಮುದಾಯಗಳ ಮೇಲಿನ ಚಾರಿತ್ರ್ಯಿಕ ದೌರ್ಜನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯದರ್ಶಿ ಹುಲಿಕಟ್ಟೆ ರೆಹಮತ್, ಎಐಎಸ್ಎಫ್ ಚಂದ್ರನಾಯ್ಕ, ಸಿಪಿಐ ಎಂ. ಎಲ್. ಸಂದೇರ್ ಪರಶುರಾಮ್, ವಿವಿಧ ಸಂಘಟನೆಯ ಎಂ. ಶಬ್ಬೀರ್, ಬಸವರಾಜ್ ಹಾರಕನಾಳು, ಬಸವರಾಜು ಮಾಡ್ಲಿಗೇರಿ ಇನ್ನಿತರರಿದ್ದರು.