ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎಂಪಿಆರ್
ಹೊನ್ನಾಳಿ, ಮಾ.26- ರಾಜ್ಯ ಸರ್ಕಾರ ಹಿರೇಕಲ್ಮಠದ ಅಭಿವೃದ್ಧಿಗೆ ಒಂದು ಕೋಟಿ ಹಣ ಬಿಡುಗಡೆ ಮಾಡಿದ್ದು ,ಮುಂದಿನ ದಿನಗಳಲ್ಲಿ ಮತ್ತಷ್ಟು ಅನು ದಾನ ಬಿಡುಗಡೆ ಮಾಡಿಸುವುದಾಗಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಒಡೆಯರ್ ಮೃತ್ಯುಂಜಯ ಸ್ವಾಮಿ ಗಳ 51ನೇ ವಾರ್ಷಿಕ ಪುಣ್ಯಾರಾಧನೆ, ಒಡೆಯರ್ ಚಂದ್ರಶೇಖರ ಸ್ವಾಮಿಗಳ 6ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ನವೋದ್ಯಮ ಕಾರ್ಯಾಗಾರ 2021 ದತ್ತಿ ಉಪನ್ಯಾಸ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರೇಮಠದಲ್ಲಿ ಕೃಷಿ ಕಾಲೇಜು ಆರಂಭಿಸಬೇ ಕೆಂಬುದು ಶ್ರೀಗಳ ಆಸೆಯಾಗಿದ್ದು, ಇದಕ್ಕೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿಗಳ ಬಳಿ ಚರ್ಚೆ ಕೂಡ ನಡೆಸಲಾಗಿದೆ. ಈಗಾಗಲೇ ಸರ್ಕಾರದಿಂದ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದು, ಕೆಲ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ಶೀಘ್ರವೇ ಕೃಷಿ ಕಾಲೇಜು ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಶ್ರೀ ಮಠವು ಜ್ಞಾನ ದಾಸೋಹದ ಜೊತೆಗೆ ಕಲೆ, ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುತ್ತಾ ಬರುತ್ತಿದೆ ಎಂದರು. ಪ್ರತಿವರ್ಷ ಮಠದಲ್ಲಿ ಸರಳ ವಿವಾಹ ಮಠದಲ್ಲಿ ನಡೆಸುತ್ತಿದ್ದು, ಪ್ರತಿವರ್ಷ ಮಠದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದರು. ನವ ಜೋಡಿಗಳಿಗೆ ಶುಭ ಕೋರಿ, ಕಿವಿ ಮಾತು ಹೇಳಿದರು.ಕೊರೊನಾ ಕಾರಣದಿಂದ ಸರಳವಾಗಿ ಆಚರಿಸುತ್ತಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಕರೆ ನೀಡಿದರು.
ಮಾಜಿ ಶಾಸಕ ಶಾಂತನಗೌಡರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಿವಕುಮಾರ ರಾಂಪುರ ಬೃಹನ್ಮಠದ ಹಾಲಸ್ವಾಮಿಗಳು, ಕರ್ಜಗಿ ಗೌರಿಮಠದ ಶ್ರೀ ಶಿವಯೋಗಿ ಸ್ವಾಮಿಗಳು ಉಪಸ್ಥಿತರಿದ್ದರು.