ಹರಿಹರ ತಹಶೀಲ್ದಾರ್ ತಂಡದಿಂದ ದಂಡ, ಜಾಗೃತಿ
ಹರಿಹರ, ಮಾ.26- ಕೊರೊನಾ ರೋಗ ಅಧಿಕ ಪ್ರಮಾಣದಲ್ಲಿ ಹರಡುವ ಲಕ್ಷಣಗಳು ಕಾಣಿಸುತ್ತಿದ್ದು, ರೋಗ ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ದಂಡವನ್ನು ಹಾಕಲು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಸಿಪಿಐ ಸತೀಶ್ ಕುಮಾರ್, ಪಿಎಸ್ಐ ಬಸವರಾಜ್ ತೆಲಿ ತಂಡ ನಗರದ ಪ್ರಮುಖ ರಸ್ತೆಯಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಕಳೆದ ಒಂದು ವರ್ಷದಿಂದ ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿರುವ ಕೊರೊನಾ ರೋಗದ ಹೆಮ್ಮಾರಿ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಮತ್ತೆ ಹೆಚ್ಚಾಗುತ್ತಿದ್ದು, ರೋಗ ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನವಶ್ಯಕವಾಗಿ ಓಡಾಡುವುದು, ಜನ ಸಂದಣಿ ಇರುವ ಸ್ಥಳದಲ್ಲಿ ಸೇರುವುದನ್ನು ಬಿಟ್ಟರೆ ಕೊರೊನಾ ರೋಗವನ್ನು ನಿಯಂತ್ರಣ ಮಾಡಲು ಸಾಧ್ಯವಿದೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಕೊರೊನಾ ರೋಗವನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಹೇಳಿದರು.
ಈಗಾಗಲೇ ಸರ್ಕಾರದ ಆದೇಶವನ್ನು ಪಾಲಿಸಲು ಎಲ್ಲಾ ವಾಹನಗಳಲ್ಲಿ ಓಡಾಡುವ ಸವಾರರಿಗೆ, ಅಂಗಡಿಯ ಮಾಲೀಕರಿಗೆ, ಸರ್ಕಾರಿ ಕಚೇರಿಯ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ನಿರ್ಲಕ್ಷ್ಯ ತೋರಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.