ಚನ್ನಗಿರಿ, ಜೂ. 28- ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕೆಎಸ್‍ಡಿಎಲ್ ನಿಗಮದ ಸಿಎಸ್‍ಆರ್ ನಿಧಿಯಲ್ಲಿ ಮಂಜೂರು ಮಾಡಲಾದ 80 ಲಕ್ಷ ರೂ. ವೆಚ್ಚದ ನೂತನ ಆಕ್ಸಿಜನ್ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹಾಗೂ ಚನ್ನಗಿರಿ ಶಾಸಕರು ಹಾಗೂ ಕೆಎಸ್‍ಡಿಎಲ್ ನಿಗಮದ ಅಧ್ಯಕ್ಷ ಮಾಡಳ್ ವಿರೂಪಾಕ್ಷಪ್ಪ ಲೋಕಾರ್ಪಣೆಗೊಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್, ತಾಲ್ಲೂಕಿಗೆ ಅಗತ್ಯವಾಗಿ ಬೇಕಾಗಿರುವ ಆಕ್ಸಿಜನ್ ಘಟಕ ಆರಂಭವಾಗಿದ್ದು, ಇದರ ಸದುಪಯೋಗವಾಗಬೇಕು. ಸೋಂಕಿತರಿಗೆ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು ಎಂದರು. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ನೂತನ ಆಕ್ಸಿಜನ್ ಘಟಕವು ಗಂಟೆಗೆ 30 ಸಾವಿರ ಲೀಟರ್ ಆಕ್ಸಿಜನ್ ಹಾಗೂ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುತ್ತದೆ ಎಂದರು.
ಕೆಎಸ್‍ಡಿಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಹೆಚ್‍ಒ ಡಾ.ನಾಗರಾಜ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಇದ್ದರು.