ಹರಿಹರ, ಆ.5- ಮಕ್ಕಳು ತಾಯಿಯ ಎದೆ ಹಾಲು ಕುಡಿಯುವುದರಿಂದ ಮೆದುಳು ಚುರುಕಾಗಿ ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದುತ್ತದೆ ಎಂದು ಹರಿಹರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹನುಮನಾಯ್ಕ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಗು ಚಿಕ್ಕದಾಗಿ ಇರುವ ಸಮಯದಲ್ಲಿ ತಾಯಿಯ ಎದೆ ಹಾಲು ಬಹುಮುಖ್ಯ ಆಹಾರವಾಗಿರುತ್ತದೆ. ತಾಯಂ ದಿರು ನಿರ್ಲಕ್ಷ್ಯ ಭಾವನೆ ತೋರದೆ ಮಗುವಿಗೆ ಎದೆ ಹಾಲು ಉಣಿಸಬೇಕು. ಇದರಿಂದಾಗಿ ಮಗುವಿನಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಬಹುದು ಮತ್ತು ಮಗುವಿನಲ್ಲಿ ಚಂಚಲತೆ ಕಡಿಮೆಯಾಗಿ ಚುರುಕುತನ ಬರುತ್ತದೆ. ಮಗು ಸದೃಢವಾಗಿ ಬೆಳೆಯುತ್ತದೆ ಎಂದು ಹೇಳಿದರು.
ಸ್ತ್ರೀ ರೋಗ ತಜ್ಞರಾದ ಡಾ. ಸವಿತಾ ಮಾತನಾಡಿ, ತಾಯಿ ಮಗುವಿಗೆ ಜನ್ಮ ನೀಡಿದ ಸ್ವಲ್ಪ ಸಮಯದಲ್ಲಿ ಮಗು ತನ್ನ ತಾಯಿಯ ಎದೆಯ ಹಾಲನ್ನು ಬಯಸುತ್ತದೆ. ಮಗುವಿಗೆ ಎದೆಹಾಲು ಕುಡಿಸಿದ ಮೇಲೆ ಮಗುವಿನ ಅಂಗಾಂಗಗಳ ಚಲನೆ ಪ್ರಾರಂಭವಾಗುತ್ತದೆ. ಹಾಗಾಗಿ ತಾಯಿಯ ಎದೆ ಹಾಲು ಬಹು ಮುಖ್ಯ. ತಾಯಿಯ ಹಾಲಿನ ಮುಂದೆ ಯಾವುದೇ ಆಹಾರ ಮಗುವಿನ ಬೆಳವಣಿಗೆಗೆ ಅಷ್ಟು ಸಹಕಾರಿಯಲ್ಲ. ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದರು.
ಮಕ್ಕಳ ವೈದ್ಯರಾದ ಡಾ. ಪಂಕಜಾ ಮಾತನಾಡಿ, ಒಂದು ಮಗು ಹುಟ್ಟಿದ ನಂತರ ಮತ್ತೊಂದು ಮಗುವಿಗೆ ಮೂರು, ನಾಲ್ಕು ವರ್ಷ ಅಂತರವಿರಬೇಕು. ಅಂತರ ಕಾಯ್ದುಕೊಳ್ಳದಿದ್ದರೆ ಮಕ್ಕಳ ಪೋಷಣೆ ಕಷ್ಟವಾಗಲಿದೆ. ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆಯನ್ನು ಹಾಕಿಸಬೇಕು. ಸುತ್ತಮುತ್ತಲಿನ ಪರಿಸರವು ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಮಮತಾ,
ಡಾ. ಪ್ರತಾಪ್, ಡಾ. ಲೋಹಿತ್, ಡಾ. ರಾಜಪ್ಪ, ವೈದ್ಯಕೀಯ ಸಿಬ್ಬಂದಿಗಳಾದ ರೂಪಾ, ಸುಮಂಗಳ, ವಿಮಲನಾಯ್ಕ್ ಇನ್ನಿತರರಿದ್ದರು.