ಹರಪನಹಳ್ಳಿ, ಆ.5- ಕೋವಿಡ್ ಮೂರನೇ ಅಲೆ ಬರುವ ಮುನ್ಸೂಚನೆ ಇದ್ದರೂ, ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಉಪನೋಂದಣಾಧಿಕಾರಿಗಳ ಕಛೇರಿ ಸದಾ ಜನ ಜಂಗುಳಿಯಿಂದ ಕೂಡಿದ್ದು, ಮಾಸ್ಕ್, ಸಾಮಾಜಿಕ ಅಂತರಕ್ಕೆ ತಿಲಾಂಜಲಿ ನೀಡಲಾಗಿದೆ.
ಜಮೀನು, ನಿವೇಶನ ಹಾಗೂ ಮನೆ ನೋಂದಣಿ ಸಂಬಂಧ ಕಛೇರಿಗೆ ತಾಲ್ಲೂಕು ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಿದ್ದು, ಕೊರೊನಾ ಸೋಂಕು ಹರಡುವ ಸಂಭವವಿದ್ದು, ಇಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾ ಜಿಕ ಅಂತರ ಕಾಪಾಡುವುದು ಅತ್ಯಗತ್ಯ. ಆದರೆ ಇಲ್ಲಿ ಯಾರೂ ಹೇಳುವವರಿಲ್ಲದಂತಾಗಿದೆ.
ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ರಾಜ್ಯದಲ್ಲಿಯೂ ಮೂರನೇ ಅಲೆ ಅಪ್ಪಳಿಸುವ ನಿರೀಕ್ಷೆಯಿಂದಾಗಿ ರಾಜ್ಯದ ಗಡಿ ಜಿಲ್ಲೆಗಳಾದ ಕೊಡಗು, ಮೈಸೂರು, ದಕ್ಷಿಣ ಕನ್ನಡದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.
ಜೊತೆಗೆ ರಾಜ್ಯ ರಾಜಧಾನಿಯಲ್ಲಿನ ದೊಡ್ಡ ದೊಡ್ಡ ಅಪಾರ್ಟ್‍ಮೆಂಟ್‍ಗಳಲ್ಲಿ ಕೊರೊನಾ ಸೋಂಕು ಹರಡಿ, ಸೀಲ್ಡ್‍ಡೌನ್ ಮಾಡಲಾಗಿದೆ. ಹೀಗಿದ್ದರೂ ಹರಪನಹಳ್ಳಿ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಯಾವುದೇ ಕನಿಷ್ಟ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಉಪನೋಂದಣಾ ಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು.
ಇಲಾಖಾ ಕಾರ್ಯಗಳಿಗೆ ಅನುಕೂಲ ವಾಗುವ ಹಿತದೃಷ್ಟಿಯಿಂದ ಪಟ್ಟಣದಲ್ಲಿ 2009ರಲ್ಲೇ ಹೊಸಪೇಟೆ ರಸ್ತೆಯ ಮಿನಿ ವಿಧಾನಸೌಧ ನಿರ್ಮಾಣವಾಗಿ ಕಾರ್ಯಾರಂ ಭವೂ ಆಗಿದೆ. ಪಟ್ಟಣದ ಉಪನೋಂದಣಾ ಧಿಕಾರಿಗಳ ಕಛೇರಿಯಲ್ಲಿ ಮೂಲಸೌಕರ್ಯ ಗಳ ಕೊರತೆ ಇದ್ದರೂ ಈವರೆಗೂ ಮಿನಿ ವಿಧಾನಸೌಧಕ್ಕೆ ಸ್ಥಳಾಂತರವಾಗದಿರುವುದು ಅನುಮಾನಕ್ಕೀಡಾಗಿದೆ.
2009 ರಲ್ಲಿಯೇ ಉಪನೋಂದಣಾ ಧಿಕಾರಿಗಳ ಕಛೇರಿಗೆ ಮಿನಿ ವಿಧಾನಸೌಧದಲ್ಲಿ ಕೊಠಡಿ ನೀಡಲಾಗಿತ್ತು. ಆದರೆ ಆಗ ಕೊಠಡಿ ಕಿರಿದಾಗಿದೆ ಎನ್ನುವ ಕಾರಣಕ್ಕೆ ಕಛೇರಿಯನ್ನು ಸ್ಥಳಾಂತರಿಸಿಲ್ಲ. ಆದರೆ 2014ರಲ್ಲಿ ಮತ್ತೆ ಕೊಠಡಿಬೇಕು ಎಂದು ಮನವಿ ಸಲ್ಲಿಸಿದ್ದರು. ಆಗ ಮಿನಿ ವಿಧಾನಸೌಧದಲ್ಲಿ ಕೊಠಡಿಗಳು ಇರಲಿಲ್ಲ. ಈಗ ಮತ್ತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈಗಾಗಲೇ ಎರಡು ಸರ್ಕಾರಿ ಮಳಿಗೆಗಳನ್ನು ನೋಡಿದ್ದಾರೆ. ಅವು ಕಿರಿದಾಗುತ್ತವೆ ಎನ್ನುವ ಕಾರಣಕ್ಕಾಗಿ ಖಾಸಗಿ ಮಳಿಗೆಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಹುಡುಕಾಟದಲ್ಲಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಇದೆ.
ನಮ್ಮ ಕಣ ನೋಂದಣಿ ಮಾಡಿಸಲು ಕಳೆದ ಒಂದು ವಾರದಿಂದ ಕಛೇರಿಗೆ ಅಲೆದಾಡುತ್ತಿದ್ದೇನೆ. ನಿನ್ನದು ಸರತಿ ಬಂದಿಲ್ಲ ಇವತ್ತು ಬಾ, ನಾಳೆ ಬಾ ಎಂದು ಅಲೆದಾಡಿಸುತ್ತಿದ್ದಾರೆ. ಆದರೆ ಹಣವಂತರು ಬಂದರೆ ಒಂದೇ ತಾಸಿಗೆ ಅವರ ನೋಂದಣಿ ಮಾಡಿಸಿ ಕಳುಹಿಸುತ್ತಾರೆ.
ಇ.ಸಿ. ತೆಗೆಯಲು ಸಾವಿರಗಟ್ಟಲೆ ಕೇಳುತ್ತಾರೆ. ಗೊತ್ತಿಲ್ಲದ ನಮ್ಮಂತಹ ಅಮಾಯಕ ಜನರಿಗೆ ಈ ನೋಂದಣಿ ಕಛೇರಿ ಅಲ್ಲ ಎನ್ನುತಾರೆ ಎರಡೆತ್ತಿನಹಳ್ಳಿ ಗ್ರಾಮದ ರೈತ ಜಿ. ಹನುಮಂತ.