ಪರಮಾತ್ಮನನ್ನು ಬೆಸೆಯುವ ಬಂಧವೇ ಯೋಗ

ದೊಡ್ಡಬಾತಿ ತಪೋವನದ ಕಾರ್ಯಕ್ರಮದಲ್ಲಿ ಶಶಿಕುಮಾರ್ ಮೆಹರ್ವಾಡೆ

ದೊಡ್ಡಬಾತಿ, ಜೂ.27- ಮುಕ್ತ ಆಹಾರ, ವಿಹಾರ, ಚಟುವಟಿಕೆ ಮೂಲಕ ನಿದ್ರೆ, ಸ್ವಪ್ನ,  ಜಾಗೃತಿ ಸ್ಥಿತಿ ಮತ್ತು ಸಮಾಧಿ ಸ್ಥಿತಿಯನ್ನು ಆನಂದಿಸುವುದೇ ನಿಜವಾದ ಯೋಗ. ಯೋಗ ಜೀವಾತ್ಮ ಮತ್ತು ಪರಮಾತ್ಮನನ್ನು ಬೆಸೆಯುವ ಪವಿತ್ರ ಬಂಧ ಎಂದು ತಪೋವನ ಸಂಸ್ಥೆ ಅಧ್ಯಕ್ಷ ಡಾ. ಶಶಿಕುಮಾರ್ ಮೆಹರ್ವಾಡೆ  ತಿಳಿಸಿದರು.     

ದೊಡ್ಡಬಾತಿ ತಪೋವನದ ಸಭಾಂಗಣದಲ್ಲಿ  ಮೊನ್ನೆ ಹಮ್ಮಿಕೊಂಡಿದ್ದ 7ನೇ ಅಂತರರಾಷ್ಟ್ರೀಯ  ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಆಹಾರ, ವಿಹಾರ ಕ್ರಿಯೆ ಯುಕ್ತವಾಗಿದ್ದಾಗ ಯೋಗ ದುಃಖವನ್ನು ಪರಿಹಾರ ಮಾಡುತ್ತದೆ ಎಂದು ಅವರು ಹೇಳಿದರು.

ಸಿಂಧುವಿನಿಂದ ಬೇರೆಯಾದ ಬಿಂದುವಿಗೆ ಯಾವ ರೀತಿ ಅಸ್ತಿತ್ವವಿಲ್ಲವೋ ಅದೇ ರೀತಿ ಆತ್ಮಕ್ಕೆ ಇರುತ್ತದೆ. ಮೂಲವನ್ನು ಸೇರುವ  ತುಡಿತ ಸದಾ ಎಲ್ಲಾ ಜೀವಾತ್ಮಗಳಲ್ಲಿ ಇರುತ್ತದೆ. ಆ ಸೇರುವಿಕೆಗಳು ಯೋಗಕ್ಕೆ ಪೂರಕ ಎಂದು ಡಾ. ಶಶಿಕುಮಾರ್ ವಿಶ್ಲೇಷಿಸಿದರು.

ಔಷಧಿ ಜೊತೆ ಪಥ್ಯ ಹೇಗೆ ಮುಖ್ಯವೋ, ಅದೇ ರೀತಿ ನಿತ್ಯ ಜೀವನವೂ ಮುಖ್ಯ. ಒಂದು ಗಂಟೆ ಯೋಗ ಮಾಡಿ, ಉಳಿದ 23 ಗಂಟೆ ಪೂರಕ ಜೀವನ ನಡೆಸಿದರೆ, ಅಂತಹ ಯೋಗ ಯಾವ ಪ್ರಯೋಜನವೂ ನೀಡದು. ಇಡೀ ಬದುಕು ಯೋಗಮಯವಾಗಬೇಕು. 

ಆದ್ದರಿಂದ ವರ್ಷಕ್ಕೊಮ್ಮೆ ಯೋಗ ದಿನಾಚರಣೆ ಮಾಡುವ ಬದಲು,  ದಿನವೂ ಯೋಗಾಚರಣೆ ಮಾಡಿದರೆ ಉತ್ತಮ ಆರೋಗ್ಯ ಹೊಂದಬಹುದು ಎಂದು ಪ್ರತಿಪಾದಿಸಿದರು.  

ಲೋಕಾಯುಕ್ತ  ಎಸ್.ಪಿ ಜಯಪ್ರಕಾಶ್, ಡಿವೈಎಸ್ಸಿ ನರಸಿಂಹ ತಾಮ್ರಧ್ವಜ, ಹರಿಹರ ಸಿಪಿಐ ಸತೀಶ್, ದಾವಣಗೆರೆ ಗ್ರಾಮಾಂತರ ಸಿಪಿಐ ನಿಂಗನಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!