ಮಧ್ಯ ಕರ್ನಾಟಕದ ಹೃದಯ ಭಾಗದಲ್ಲಿರುವ ಹರಿಹರ ನಗರ ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಾಲಯ ಹಾಗೂ ತುಂಗಭದ್ರಾ ನದಿ ಹರಿಯುವ ಪುಣ್ಯಕ್ಷೇತ್ರವಾಗಿದೆ.
ಕೆಲ ವರ್ಷಗಳ ಹಿಂದೆ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯಿಂದ ನಗರ ವಾಣಿಜ್ಯ ವಿಷಯದಲ್ಲೂ ಪ್ರಸಿದ್ಧಿ ಹೊಂದಿತ್ತು. ಆದರೆ ದುರ್ದೈವವೋ ಏನೋ ಸಾವಿರಾರು ಜನರ ಅನ್ನದ ಚೀಲ ತುಂಬುತ್ತಿದ್ದ ಕಂಪನಿ ಮುಚ್ಚಿದ ಪರಿಣಾಮ, ನಗರದ ಕಾರ್ಮಿಕರ ಬದುಕನ್ನು ಕಿತ್ತುಕೊಂಡು ಕತ್ತಲೆಯಲ್ಲಿ ಮುಳುಗಿಸಿ, ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದವು.
ಇವೆಲ್ಲಾ ಮರೆತು ಜನರು ಜೀವನ ಸಾಗಿಸುವ ಸಮಯದಲ್ಲಿ ಕೊರೊನಾ ಮಾರಿ ವಕ್ಕರಿಸಿ, ಬದುಕನ್ನು ಮೂರಾಬಟ್ಟೆ ಮಾಡಿತು. ಕೊರೊನಾ ಹೋಯಿತಪ್ಪಾ ಎನ್ನುವಷ್ಟರಲ್ಲಿ ಮತ್ತೆ ನಾ ಬಂದೆ ಎಂದು ಕೂಗುತ್ತಿದೆ.
ಇವೆಲ್ಲದರ ನಡುವೆ ಹರಿಹರ ನಗರದಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಯಾವುದೇ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರದೆ, ನಗರ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಗತಿಯನ್ನೇ ಕಾಣದೆ ಹೋಗುತ್ತಿದ್ದೇವೆ. ನಗರಸಭೆಯ ಆರೋಗ್ಯ ವಿಭಾಗ ಸ್ವಚ್ಛತಾ ಕಾರ್ಯಕ್ಕೆ ಗಮನ ನೀಡದ ಪರಿಣಾಮ ಚರಂಡಿಗಳು ಕಟ್ಟಿಕೊಂಡು ಗಬ್ಬೆದ್ದು ನಾರುತ್ತಿವೆ. ಸೊಳ್ಳೆ, ಹಂದಿಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವುದಕ್ಕೆ ದಾರಿ ಮಾಡಿಕೊಟ್ಟಂತಿದೆ. ಹಂದಿ, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಅಸಮರ್ಪಕ ಯುಜಿಡಿ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದು, ಮಕ್ಕಳು, ವೃದ್ಧರು ಓಡಾಡದ ಮಟ್ಟದಲ್ಲಿದೆ.
ನಗರದ ಎಲ್ಲಾ ಬಡಾವಣೆಯ ಬಹುತೇಕ ರಸ್ತೆಗಳು ಹಾಳಾಗಿ ಹೋಗಿವೆ. ನಗರದ ಪಿ.ಬಿ. ರಸ್ತೆಯ ಶಿವಬ್ಯಾಂಕ್ ಮುಂದೆ ಹಾಕಿರುವ ಹಾಗೂ ಶಿವಮೊಗ್ಗ ರಸ್ತೆಯಲ್ಲಿ ಹಾಕಿರುವ ಅಸಮರ್ಪಕ ಹಂಪ್ಸ್ಗಳಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ಓಡಾಡುವ ವೇಳೆ ಪರದಾಡುವಂತಾಗಿದೆ. ಪಿ.ಬಿ. ರಸ್ತೆಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಹಸಿರನ್ನು ಬೆಳೆಸುವಲ್ಲಿ ಶ್ರಮ ವಹಿಸಿಲ್ಲ. ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ನೀರು ಹರಿಯುವುದರಿಂದ ದೊಡ್ಡ ಪ್ರಮಾಣದಲ್ಲಿ ಮರಳು ಶೇಖರಣೆ ಆಗುತ್ತಿದೆ. ಆದರೆ ಅಕ್ರಮ ಮರಳು ಸಾಗಾಟದಿಂದ ಸಾಮಾನ್ಯ ಜನರು ದುಪ್ಪಟ್ಟು ಹಣ ಕೊಟ್ಟು ಖರೀದಿಸುವಂತೆ ಆಗಿದೆ.
ನಗರ ಹಾಗೂ ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸಗಳಾಗದೆ ಇರುವುದಕ್ಕೆ ಮಾಜಿ ಶಾಸಕ ಬಿ.ಪಿ. ಹರೀಶ್ ಕಾರಣ. ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷವೂ ಕಾರಣವಾಗಿದೆ. ಹಾಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂದು ಶಾಸಕ ಎಸ್. ರಾಮಪ್ಪ ಅವರ ಅಭಿಪ್ರಾಯವಾಗಿದೆ.
ನಗರಸಭೆ ವತಿಯಿಂದ ಸೊಳ್ಳೆಗಳ ನಿರ್ಮೂಲನೆಗೆ ಔಷಧಿ ಸಿಂಪಡಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತಾ ಕಾರ್ಯಗಳನ್ನು ಸೂಕ್ತವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಲಸಿರಿ ಯೋಜನೆ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಬೇಗನೆ ಮುಗಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮಿ ತಿಳಿಸಿದ್ದಾರೆ.
ನಗರಸಭೆ ವತಿಯಿಂದ ನಡೆಯುತ್ತಿರುವ 24×7 ನಿರಂತರ ಕುಡಿಯುವ ನೀರಿನ ಜಲಸಿರಿ ಯೋಜನೆಯ ಕೆಲಸವೂ ಕೂಡ ಅಷ್ಟೊಂದು ಗುಣಮಟ್ಟದಿಂದ ಕೂಡಿಲ್ಲ. ನಗರದ ಹೊರವಲಯದ ಬಡಾವಣೆಯ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಒದಗಿ ಬಂದಿದೆ.
ಶಾಸಕ ಎಸ್. ರಾಮಪ್ಪ ಶಾಸಕರಾಗಿ ಆಯ್ಕೆ ಆದ ಪ್ರಾರಂಭದಲ್ಲಿ 2 ತಿಂಗಳು ಜನಸ್ಪಂದನ ಸಭೆ ನಡೆಸಿದರು. ಅದಾದ ಮೂರು ವರ್ಷಗಳ ನಂತರದಲ್ಲಿ ಮೊನ್ನೆ ಜನಸ್ಪಂದನ ಸಭೆಯನ್ನು ಏರ್ಪಡಿಸಿದ್ದು, ಜನರು ತಮ್ಮ ನೋವುಗಳ ಸರಮಾಲೆಯನ್ನು ತೋಡಿಕೊಂಡಿದ್ದಾರೆ. ಭ್ರಷ್ಟಾಚಾರ ತಡೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಹೀಗೆ ಹತ್ತು ಹಲವು ಸಮಸ್ಯೆಗಳ ಆಗರವಾಗಿರುವ ನಗರದಲ್ಲಿ ಪ್ರಗತಿ ದೂರದ ಮಾತಾಗಿದೆ. ಭ್ರಷ್ಟಾಚಾರ, ಜನಪ್ರತಿನಿಧಿಗಳ ನಡೆ ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ಇದಕ್ಕೆಲ್ಲಾ ಮುಕ್ತಿ ಎಂದೋ ಎನ್ನುತ್ತಿದ್ದಾರೆ ನಾಗರಿಕರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ನಗರಸಭೆ ಆಡಳಿತಾಧಿಕಾರಿಯಾಗಿದ್ದು, ಈ ಬಾರಿ ನಡೆಯುವ ನಗರಸಭೆ ಬಜೆಟ್ನಲ್ಲಿ ನಗರದ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುವುದರ ಜೊತೆಗೆ ಸ್ಥಳೀಯ ಜನರ ಬಹುದಿನಗಳ ಆಸೆಯಾದ ನೂತನ ಸಾಂಸ್ಕೃತಿಕ ರಂಗಮಂದಿರ, ಅಂಬೇಡ್ಕರ್ ಭವನ, ಹೂವು, ಹಣ್ಣು, ತರಕಾರಿ, ಮಟನ್ ಮಾರುಕಟ್ಟೆ ಹಾಗೂ ಮೇಲ್ಕಂಡ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರಮಿಸಲಿ ಎಂಬುದು ಸ್ಥಳೀಯ ಜನರ ಕೋರಿಕೆಯಾಗಿದೆ.