ಎಐಡಿಎಸ್ಓ-ಎಐಓಡಿವೈಒ-ಎಐಎಂಎಸ್ಎಸ್ ನಿಂದ ಹುತಾತ್ಮ ದಿನಾಚರಣೆ
ದಾವಣಗೆರೆ, ಮಾ.23- ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಓಡಿವೈಒ), ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಜಿಲ್ಲಾ ಸಮಿತಿಯಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿನ ಭಗತ್ ಸಿಂಗ್ ಪ್ರತಿಮೆ ಬಳಿ ಇಂದು ಭಗತ್ಸಿಂಗ್ ಅವರ 91ನೇ ಹುತಾತ್ಮ ದಿನಾಚರಣೆ ಪ್ರಯುಕ್ತ ಸ್ಮರಣೆ ಮಾಡಲಾಯಿತು.
ಎಐಒಡಿಎಸ್ ಜಿಲ್ಲಾ ಉಪಾಧ್ಯಕ್ಷ ಕಿರಣ್ ಮಾತನಾಡಿ, ಭಗತ್ಸಿಂಗ್ ಅವರ ಆದರ್ಶದ ವಿಚಾರಗಳನ್ನು ವಿದ್ಯಾರ್ಥಿ-ಯುವ ಜನರು ಜೀವನದಲ್ಲಿ ಅಳವಡಿಸಿಕೊಂಡು ಪ್ರಸ್ತುತ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟಬೇಕು. ಭಗತ್ ಸಿಂಗ್, ರಾಜಗುರು, ಸುಖದೇವ್ ಈ ಮಹನೀಯರ ಕನಸಿನ ಭಾರತ ನಿರ್ಮಾಣವಾಗಿಲ್ಲ. ಶಿಕ್ಷಣ ವ್ಯಾಪಾರೀಕರಣ, ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ ದಿನೇ ದಿನೇ
ಹೆಚ್ಚುತ್ತಿದೆ. ಎಲ್ಲಾ ಸಮಸ್ಯೆಗೆ ಪರಿಹಾರವೆಂದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂದರು.
ಎಐಡಿವೈಒ ಜಿಲ್ಲಾ ಸಂಘಟನಾಕಾರ ಪರಶುರಾಮ ಮಾತನಾಡಿ, ನಮ್ಮನ್ನಾಳುವ ರಾಜಕೀಯ ನಾಯಕರು ತಮ್ಮ ಸ್ವಾರ್ಥ ಮತ್ತು ಬಂಡವಾಳಿಗರ ಹಿತ ಕಾಯುವ ಕೆಲಸ ಮಾಡುತ್ತಾರೆಯೇ ಹೊರತು, ಜನಪರ ಕಾಳಜಿಯನ್ನು ತೋರುವುದಿಲ್ಲ. ಆದ್ದರಿಂದ ಜನಸಾಮಾನ್ಯರು ತಮ್ಮ ಬೇಡಿಕೆಗಳಿಗಾಗಿ ಒಗ್ಗಟ್ಟಿನ ಹೋರಾಟ ಕಟ್ಟಬೇಕಿದೆ ಎಂದರು.
ಎಐಎಮ್ಎಸ್ಎಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕುವಾಡ ಮಾತನಾಡಿ, ಚುನಾವಣೆಗಳು ಬಂದಾಗ ಸರ್ಕಾರ ಹಲವಾರು ಆಶ್ವಾಸನೆಗಳನ್ನು ನೀಡಲಿದ್ದು, ಅಡುಗೆ ಅನಿಲದ ಬೆಲೆ ಗಗನಕ್ಕೇರಿಸಿದೆ. `ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಭಾಷಣದಲ್ಲಿ ಹೇಳಿದರೆ ಸಾಲದು ಹೆಣ್ಣುಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಘಟನೆಗಳ ಸದಸ್ಯರುಗಳಾದ ಪುಷ್ಪ, ಕಾವ್ಯ, ಕಿರಣ, ತಿಪ್ಪೇಸ್ವಾಮಿ, ಜ್ಯೋತಿ ಕುಕ್ಕುವಾಡ, ಪ್ರಕಾಶ್, ಸರಸ್ವತಿ, ಸ್ಮಿತಾ, ಮಂಜುನಾಥ್ ಕೈದಾಳ್, ಮಂಜುನಾಥ್ ಕುಕ್ಕುವಾಡ, ಡಾ. ವಸುದೇಂದ್ರ, ಗುರು, ಪರಶುರಾಮ್, ಯತೀಂದ್ರ, ಸಂತೋಷ್ ಇದ್ದರು.