ಹರಿಹರ, ಮಾ.23- ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಆದಾಪುರದ ವೀರಭದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ದಾವಣಗೆರೆ ಉಪವಿಭಾಗಾಧಿ ಕಾರಿ ಮಮತಾ ಹೊಸಗೌಡ್ರು ತಿಳಿಸಿದರು.
ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ನಿಗದಿಯಾದ ಚುನಾವಣೆಗೆ ದಾವಣಗೆರೆ ಉಪವಿ ಭಾಗಾಧಿಕಾರಿ ಮಮತಾ ಹೊಸಗೌಡ್ರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಿಗದಿ ಪಡಿಸಿದಂತೆ ತಾ.ಪಂ. ಅಧ್ಯಕ್ಷರ ಚುನಾವಣೆಗೆ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದ ಸದಸ್ಯ ಆದಾಪುರದ ವೀರಭದ್ರಪ್ಪ ನವರು ಮಾತ್ರ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ ಒಂದು ಗಂಟೆಗೆ ಚುನಾವಣೆ ಪ್ರಕ್ರಿಯೆ ಮುಂದುವರೆಯಿತು.
ತಾ.ಪಂ. 14 ಸದಸ್ಯರಲ್ಲಿ 12 ಸದಸ್ಯರು ಹಾಜರಿದ್ದರು. ಸದಸ್ಯರಾದ ಕೊಂಡಜ್ಜಿ ಪ್ರೇಮ ಹಾಗೂ ಕುಣೆ ಬೆಳಕೆರೆ ಮಹಾಂತೇಶ್ ಗೈರು ಹಾಜರಾಗಿ ದ್ದರು. ಎಸ್ಸಿ ಮೀಸಲಾತಿಯ ತಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಆದಾಪುರದ ವೀರಭದ್ರಪ್ಪನವರನ್ನು ಬಿಟ್ಟರೆ ಉಳಿದ ಯಾವುದೇ ಸದಸ್ಯರು ನಾಮಪತ್ರವನ್ನು ಸಲ್ಲಿಸದೇ ಇರುವುದರಿಂದ ವೀರಭದ್ರಪ್ಪನವರನ್ನು ತಾ.ಪಂ. ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾದ ದಾವಣಗೆರೆ ಉಪವಿಭಾಗಧಿಕಾರಿ ಮಮತಾ ಹೊಸಗೌಡ್ರು ತಿಳಿಸಿದರು.
ತಾ.ಪಂ.ನ ಒಟ್ಟು ಸದಸ್ಯರು 15. ಅದರಲ್ಲಿ ಬಿಜೆಪಿ ಪಕ್ಷದ ಸದಸ್ಯರು 5, ಜೆಡಿಎಸ್ ಪಕ್ಷದ ಸದಸ್ಯರು 6, ಕಾಂಗ್ರೆಸ್ ಪಕ್ಷದ ಸದಸ್ಯರು 4. ಆದರೆ ಸರ್ಕಾರದ ಮೀಸಲಾತಿ ಎಸ್ಸಿ ಜನಾಂಗಕ್ಕೆ ನಿಗದಿಪಡಿಸಿ ಆದೇಶ ನೀಡಿದ್ದರಿಂದ ಬಿಜೆಪಿ ಪಕ್ಷದ ಶ್ರೀದೇವಿ ಮಂಜಪ್ಪನವರು ಹಿಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಇವರ ವಿರುದ್ಧ ಕಾಂಗ್ರೆಸ್ ಪಕ್ಷದ ಆದಾಪುರದ ವೀರಭದ್ರಪ್ಪ ಅವಿಶ್ವಾಸ ತಂದರು. ಆದರೆ ಅದರಲ್ಲಿ ಕೆಲವು ಸದಸ್ಯರು ಇವರಿಗೆ ಬೆಂಬಲವನ್ನು ನೀಡುವುದಾಗಿ ತಿಳಿಸಿ ಕೊನೆಯ ಘಳಿಗೆಯಲ್ಲಿ ಕೈ ಕೊಟ್ಟಿದ್ದರಿಂದ ಇವರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತು.
ಆದರೆ ಹಠಕ್ಕೆ ಬಿದ್ದ ಆದಾಪುರದ ವೀರಭದ್ರಪ್ಪ ಉಳಿದ ಮೂರು, ನಾಲ್ಕು ತಿಂಗಳ ಅವಧಿಗಾದರೂ ನನಗೆ ಅವಕಾಶ ಕಲ್ಪಿಸಿ ಎಂದು ಮೂರೂ ಪಕ್ಷಗಳ ಮುಖಂಡರ ಬಳಿ ತಮ್ಮ ಅಹವಾಲು ಸಲ್ಲಿಸಿದರು. ಇದಕ್ಕೆ ಮೂರೂ ಪಕ್ಷಗಳ ಮುಖಂಡರಾದ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಸಮ್ಮತಿ ನೀಡಿದರು. ಇದರಿಂದಾಗಿ ಉಳಿದ ಅವಧಿಯಲ್ಲಿ ಸೇವೆ ಮಾಡುವುದಕ್ಕೆ ಆದಾಪುರದ ವೀರಭದ್ರಪ್ಪನವರಿಗೆ ಅವಕಾಶ ಕಲ್ಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಜಿ.ಪಂ. ಸದಸ್ಯರಾದ ವಿ.ಡಿ. ಹೇಮಾವತಿ ಭೀಮಪ್ಪ, ಬಿ.ಎಂ. ವಾಗೀಶ್ ಸ್ವಾಮಿ, ಎಪಿಎಂಸಿ ಸದಸ್ಯ ಮಂಜುನಾಥ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಅಬಿದಾಲಿ, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣೇಶ್, ಜಿ.ಪಂ. ಮಾಜಿ ಸದಸ್ಯ ವೀರಭದ್ರಪ್ಪ, ಜಿಗಳಿ ಆನಂದಪ್ಪ, ವಿಜಯ್ ಮಹಾಂತೇಶ್, ವಿಜಯಕುಮಾರ್ ಮಲೇಬೆನ್ನೂರು, ಬಸವಲಿಂಗಪ್ಪ ಗುತ್ತೂರು, ತಾ.ಪಂ. ಇಓ ಜಿ.ಡಿ. ಗಂಗಾಧರನ್, ತಾ.ಪಂ. ಉಪಾಧ್ಯಕ್ಷೆ ಶಾಂತಮ್ಮ ಗದಿಗೆಪ್ಪ ಎಳೆಹೊಳೆ, ಸದಸ್ಯರಾದ ಜಯಮ್ಮ ಬಸವಲಿಂಗಪ್ಪ, ಜಾಹೀರಾಬಿ ರೆಹಮಾನ್, ಎನ್.ಪಿ. ಬಸವಲಿಂಗಪ್ಪ, ವಿಶಾಲಾಕ್ಷಿ ಕೊಟ್ರೇಶಪ್ಪ, ಕೊಟ್ರಪ್ಪ ಗೌಡ್ರು ಸಿರಿಗೆರೆ, ವೈ.ಹೆಚ್. ಭಾಗ್ಯಲಕ್ಷ್ಮಿ, ಲಕ್ಷ್ಮಿ ಮಹಾಂತೇಶ್, ಬಸವಗೌಡ್ರು, ರತ್ನಮ್ಮ ಕೆ. ಆರ್. ರಂಗಪ್ಪ, ತಾ.ಪಂ. ಸಿಬ್ಬಂದಿಗಳಾದ ಕಮಲಮ್ಮ, ಲಿಂಗರಾಜ್ ಇನ್ನಿತರರಿದ್ದರು.