ಹರಪನಹಳ್ಳಿ : ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾಯಾಧೀಶರಾದ ಮಂಜುಳಾ ಉಂಡಿ ಶಿವಪ್ಪ
ಹರಪನಹಳ್ಳಿ, ಜೂ.21- ಕಾಲಮಿತಿಯಲ್ಲಿ ನ್ಯಾಯದಾನ ಆಗಬೇಕಾದರೆ, ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಮಧ್ಯೆ ಪರಸ್ಪರ ಸಹಕಾರ ಅತ್ಯವಶ್ಯಕ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಉಂಡಿ ಶಿವಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಅಷ್ಟೇ ಅಲ್ಲಾ ಸಂಸ್ಕೃತಿಯಲ್ಲೂ ಉತ್ತಮ ಹೆಸರಿರುವ ತಾಲ್ಲೂಕಾಗಿದೆ ಎಂದರೂ ತಪ್ಪಾಗಲಾರದು. ಇರುವಷ್ಟು ದಿನಗಳೂ ನಾನು ಉತ್ಸಾಹದಿಂದಲೇ ಕಾರ್ಯನಿರ್ವಹಿಸಿದ್ದೇನೆ. ಸಾರ್ವಜನಿಕರ ನಡುವೆಯೂ ಬಾಂಧವ್ಯ ಉತ್ತಮವಾಗಿತ್ತು. ಸುಶಿಕ್ಷಿತ ಜನರಿರುವ ಮಾದರಿಯ ತಾಲ್ಲೂಕಾಗಿದ್ದು ಈ ತಾಲ್ಲೂಕಿನಿಂದ ವರ್ಗಾವಣೆಯಾಗಿ ಹೋಗುತ್ತಿರುವುದು ಬೇಸರ ತಂದಿದೆ ಎಂದರು.
ವಕೀಲ ಕಣಿವಿಹಳ್ಳಿ ಮಂಜುನಾಥ್ ಮಾತನಾಡಿ, ರಸ್ತೆ ಮೇಲಿನ ಒಕ್ಕಲುತನಕ್ಕೆ ತಿಲಾಂಜಲಿ, ಹೆಲ್ಮೆಟ್ ವಿಚಾರವಾಗಿ ಬೀದಿಗಿಳಿದು ಸುರಕ್ಷತೆಯನ್ನು ಸಾರಿದ್ದ ನ್ಯಾಯಾಧೀಶರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿತ್ತು. ವಸತಿ ನಿಲಯಗಳಿಗೆ ತೆರಳಿ ಮಕ್ಕಳ ಕಷ್ಟ, ಸುಖಗಳನ್ನು ಹತ್ತಿರದಿಂದ ಗಮನಿಸಿ ಅವರಿಗೆ ಬೇಕಾದ ಸಹಾಯಕ್ಕೆ ಮುಂದಾಗಿದ್ದು, ಮಹಿಳೆಯರಿಗಿರಬೇಕಾದ ಸಹನೆ, ಕ್ಷಮಾಗುಣಗಳ ಜೊತೆಯಲ್ಲಿ ತಪ್ಪಿನ ವಿರುದ್ಧದ ಕಠೋರ ನಿಲುವುಗಳು ಇವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದ್ದವು. ಸಾಹಿತ್ಯಾಭಿರುಚಿಯನ್ನು ಹೊಂದಿದ್ದ ಇಂತಹ ಗಟ್ಟಿತನದ ಮಹಿಳಾ ನ್ಯಾಯಾಧೀಶರನ್ನು ಬಿಟ್ಟುಕೊಡಲು ಮನಸ್ಸು ಒಪ್ಪುತ್ತಿಲ್ಲ. ಆದರೂ ಇವರ ಸೇವೆ ಹಲವೆಡೆ ಪಸರಿಸಲು ವರ್ಗಾವಣೆ ಅನಿವಾರ್ಯವಾಗಿದೆ ಎಂದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ್ರು, ವಕೀಲರ ಸಂಘದ ಅಧ್ಯಕ್ಷ ಜಿ. ಚಂದ್ರೇಗೌಡ್ರು, ಕಾರ್ಯದರ್ಶಿ ಬಸವರಾಜ್, ವಕೀಲರಾದ ಕೃಷ್ಣಮೂರ್ತಿ, ಎಂ. ಅಜ್ಜಣ್ಣ, ಕೆ. ಬಸವರಾಜ್, ಕೆ. ಜಗದಪ್ಪ, ಬಿ. ರೇವನಗೌಡ, ಕೋಡಿಹಳ್ಳಿ ಪ್ರಕಾಶ್,ಬಿ.ಎಂ. ಮೃತ್ಯುಂಜಯ್, ಗೋಣಿಬಸಪ್ಪ, ಜಿ.ಎಸ್. ತಿಪ್ಪೇಸ್ವಾಮಿ, ಶಾಂತನಾಯ್ಕ, ಬಾಗಳಿ ಮಂಜುನಾಥ್, ನಾಗರಾಜ್, ಮುತ್ತಿಗಿ ಮಂಜುನಾಥ್, ಹೆಚ್. ಹಾಲೇಶ್, ಬಿ.ಎಸ್. ಬಸವನಗೌಡ, ನಂದೀಶ್ ನಾಯ್ಕ, ಜಾಕೀರ್, ತಿರುಪತಿ, ದೇವರಾಜ್, ಬಿ. ಸಿದ್ದೇಶ್, ಹುಲಿಯಪ್ಪ, ಮುಜುಬುರ್ ರೆಹಮಾನ್, ನಾಗರಾಜ್ ನಾಯ್ಕ್, ಕೊಟ್ರೇಶ್ ಇನ್ನಿತರರಿದ್ದರು.