ದಾವಣಗೆರೆ, ಜೂ.21- ಮತ್ತಿ ಹಾಗೂ ಕುಕ್ಕುವಾಡ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಭದ್ರಾ ನಾಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಇಂದು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಸ್ವಾತಂತ್ರ್ಯ ಭಾರತದ ಮಹತ್ವ ಪೂರ್ಣ ಯೋಜನೆಯಾಗಿದ್ದು, ಗ್ರಾಮೀಣ ಭಾಗವು ಮೂಲಭೂತ ಸೌಕರ್ಯದೊಂದಿಗೆ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ, ಉದ್ಯೋಗ ಇಲ್ಲದೆ ಪರಿತಪಿಸುವ ಸಾಮಾನ್ಯರಿಗೆ, ವಿಶೇಷವಾಗಿ ರೈತರ ಹೊಲಗಳಿಗೆ ಹೋಗಲು ಅವಶ್ಯಕತೆ ಇರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು `ನಮ್ಮ ಹೊಲ, ನಮ್ಮ ರಸ್ತೆ’ ಯೋಜನೆಯಡಿ ರಸ್ತೆಗಳನ್ನು ದುರಸ್ತಿ ಮಾಡಿಸುವುದು, ಮಣ್ಣಿನ ಕೊರೆತ ತಪ್ಪಿಸಲು ಕಲ್ಲುಕಟ್ಟಡ ನಿರ್ಮಾಣ ಮಾಡಲು, ಜಮೀನಿನ ಒಳಗೆ ಕಾಲುವೆಗಳನ್ನು ತೆಗೆಸಲು, ನಿಗದಿತ ಸಮುದಾಯಕ್ಕೆ ನೂತನ ತೋಟ ಕಟ್ಟಲು, ಸೋಪಾನ ಕಟ್ಟೆ ನಿರ್ಮಾಣ ಹಾಗೂ ಇನ್ನಿತರೆ ಹಲವಾರು ಪ್ರಮುಖ ಯೋಜನೆಗಳು ಜಾರಿಯಲ್ಲಿರಲಿವೆ ಎಂದು ತಿಳಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, ಪ್ರಾರಂಭದ ದಿನಗಳಲ್ಲಿ ಅಧ್ಯಕ್ಷರ ಮಾತು ಅನನುಭವವಾದ ಹೇಳಿಕೆ ಎಂದು ನಂಬಿದ್ದ ನಾನು, ಅದನ್ನು ಸುಳ್ಳಾಗಿಸಿ ಮುಂಬರುವ ಅಧ್ಯಕ್ಷರಿಗೆ ಯಾವ ರೀತಿಯಲ್ಲಿ ಕೆಲಸ ಮಾಡಬೇಕು. ನೀರನ್ನು ಹೇಗೆ ಕೊನೆಯಂಚಿನ ರೈತರಿಗೆ ತಲುಪಿಸಬೇಕು. ಅಧಿಕಾರಿಗಳಿಂದ ಹೇಗೆ ಕೆಲಸ ತೆಗೆಸಿಕೊಳ್ಳಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಮಂಜುನಾಥ್, ದಿನೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣ ಸ್ವಾಮಿ, ಸಹಾಯಕ ಅಭಿಯಂತರ ಮಧು ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.