ಅರಳಿಪುರದಲ್ಲಿ ಚಿರತೆ ಹೆಜ್ಜೆ ಗುರುತು

ಚನ್ನಗಿರಿ, ಜೂ.21- ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಕಣ್ಣಿಗೆ ಚಿರತೆ ಓಡಾಡಿದ ಹೆಜ್ಜೆ ಗುರುತು ಕಂಡಿರುವ ಕಾರಣ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಚನ್ನಗಿರಿ ತಾಲ್ಲೂಕಿನ ಅರಳಿಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಚಿರತೆಯ ಹೆಜ್ಜೆ ಗುರುತು ಗ್ರಾಮಸ್ಥರಿಗೆ ಕಂಡು ಬಂದಿದೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತು ಕಂಡು ಬಂದಿದೆ.

ಗ್ರಾಮಸ್ಥರು ಹೇಳುವಂತೆ ಐದಾರು ಚಿರತೆ ಓಡಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಗಮನಿಸಿದಂತೆ ಹೆಜ್ಜೆ ಗುರುತಿನ ಪ್ರಕಾರ, ಐದಾರು ಸಂಖ್ಯೆಯ ಚಿರತೆ ಇಲ್ಲ, ತಾಯಿ ಮತ್ತು ಮರಿ ಚಿರತೆಗಳು ಓಡಾಟ ಮಾಡುತ್ತಿವೆ ಎಂದಿದ್ದಾರೆ.

ಇತ್ತೀಚಿಗೆ ಬಸವಾಪಟ್ಟಣ ಬಳಿ ಚಿರತೆ ಓಡಾಡುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದರು. ಆದಾದ ನಂತರ ಅರಳಿಪುರ ಗ್ರಾಮದಲ್ಲಿ ಈಗ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡ ಬಳಿಕ ಗ್ರಾಮಸ್ಥರು ಭಯಗೊಂಡಿದ್ದಾರೆ. 

ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭಗೊಂ ಡಿದ್ದು, ರೈತರು ಕೃಷಿ ಕೆಲಸಗಳಿಗೆ ಜಮೀನುಗಳಿಗೆ ಹೋಗು ವಾಗ ಒಬ್ಬರೇ ಓಡಾಡದೇ  ಗುಂಪಾಗಿ ಹೋಗುವಂತೆ ಮುನ್ನೆಚ್ಚರಿಕೆ ನೀಡಿರುವುದಾಗಿ ಸೂಳೆಕೆರೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಮನೋಹರ್ ತಿಳಿಸಿದರು.

ಬಸವಾಪಟ್ಟಣ ಬಳಿ ಕಾಣಿಸಿಕೊಂಡ ಸ್ಥಳದಲ್ಲಿ ಕೋಳಿ ಮತ್ತು ದನದ ಮೂಳೆ ಇದ್ದದ್ದು ಕಂಡು ಬಂದಿತು. ಆಹಾರ ಅರಸಿ, ನೀರು ಕುಡಿಯಲು ಚಿರತೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಈ ವಿಚಾರವಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಚಾರ ತರಲಾಗಿದೆ. ಈಗಾಗಲೇ ಚಿರತೆಗಳ ಸೆರೆಗಾಗಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮನೋಹರ ಮಾಹಿತಿ ನೀಡಿದರು.

error: Content is protected !!