ಮುದ್ರಣ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

ಜಿಲ್ಲಾ ಮುದ್ರಣಕಾರರಿಂದ ಜಿಲ್ಲಾಧಿಕಾರಿಗೆ ಮನವಿ

ಮುದ್ರಣಾಲಯದಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ

ದಾವಣಗೆರೆ, ಮಾ.22- ಮುದ್ರಣ ಕ್ಷೇತ್ರದಲ್ಲಿ ಪದೇ ಪದೇ ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದ ಮುದ್ರಣ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಲೆ ಏರಿಕೆ ಸಮಸ್ಯೆಗೆ ಕೇಂದ್ರ ಸರ್ಕಾರ ಶೀಘ್ರ ಪರಿಹಾರ ಒದಗಿಸ ಬೇಕು ಎಂದು ದಾವಣಗೆರೆ ಜಿಲ್ಲಾ ಮುದ್ರಣಕಾರರ ಸಂಘವು ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸಂಘದ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಕಾಗದ ಕಾರ್ಖಾನೆಗಳು ಹಾಗೂ ಡೀಲರ್‍ಗಳು ಮುದ್ರಣ ಸಾಮಗ್ರಿಗಳಾದ ಪೇಪರ್, ಬೋರ್ಡ್, ಇಂಕ್, ಕೆಮಿಕಲ್ ಮತ್ತಿತರೆ ಸಾಮಗ್ರಿಗಳ ಬೆಲೆ ಏರಿಕೆ ಮಾಡುವುದರಿಂದ ಮುದ್ರಣ ಸಂಸ್ಥೆಗಳು ಸಾರ್ವಜನಿಕರಿಗೆ ಮುದ್ರಣ ಸೇವೆ ಒದಗಿಸಲು ಸಾಧ್ಯವಾಗದ ಸ್ಥಿತಿ ತಲೆದೋರಿದೆ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಮುದ್ರಣ ಸಂಸ್ಥೆಗಳು ಕಾರ್ಯನಿರ್ವ ಹಿಸುತ್ತಿದ್ದು, ಸಣ್ಣ ಮತ್ತು ಅತಿಸಣ್ಣ ಕೈಗಾರಿಕಾ ವಲಯದಲ್ಲಿ ಗುರುತಿಸಿಕೊಂಡಿವೆ. ಮುದ್ರಣ ಸಾಮಗ್ರಿಗಳ ಬೆಲೆ ಏರಿಕೆಯಿಂದ ಮುದ್ರಣದ ಒಟ್ಟು ಉತ್ಪಾದನಾ ವೆಚ್ಚದಲ್ಲಿ ಶೇ.35ರಷ್ಟು ಹೆಚ್ಚಿನ ಹೊರೆಯಾಗುತ್ತಿದೆ. ಹೀಗಾಗಿ ಸಂಘವು ಮುದ್ರಣದ ಒಟ್ಟು ಉತ್ಪಾದನೆಯಲ್ಲಿ ಶೇ.25 ರಷ್ಟು ಏರಿಕೆ ಮಾಡಲಾಗುತ್ತಿದೆ. ಮುದ್ರಣ ಸಂಸ್ಥೆಗಳ ಗ್ರಾಹಕರಾದ ಕೈಗಾರಿಕೆಗಳು, ಪ್ಯಾಕೇಜಿಂಗ್ ಆಧಾರಿತ ಕೈಗಾರಿಕೆಗಳು, ಸರ್ಕಾರಿ ಇಲಾಖೆ ಕಚೇರಿಗಳು, ಆಸ್ಪತ್ರೆಗಳು, ಖಾಸಗಿ ವಲಯಗಳು, ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ವ್ಯಾಪಾರಿಗಳು,  ಬ್ಯಾಂಕ್ ವಲಯಗಳು ಬೆಲೆ ಏರಿಕೆಯಿಂದ ಹೊಸದಾಗಿ ಪರಿಷ್ಕರಿಸಲ್ಪಟ್ಟ ಮುದ್ರಣ ಪೂರ್ವ ದರಪಟ್ಟಿಯನ್ನು ಮುದ್ರಣ ಸಂಸ್ಥೆಗಳಲ್ಲಿ ಕೇಳಿ ಪಡೆಯುವಂತೆ ಕೋರಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎ.ಎಂ. ಪ್ರಕಾಶ್, ಉಪಾಧ್ಯಕ್ಷ ಆರ್.ಎಲ್. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶಿ ಸೇರಿದಂತೆ ಇತರರು ಇದ್ದರು.

ಕಪ್ಪುಬಟ್ಟೆ ಧರಿಸಿ ಹಕ್ಕೊತ್ತಾಯ: ನವದೆಹಲಿಯ ಅಖಿಲ ಭಾರತೀಯ ಮುದ್ರಕರ ಒಕ್ಕೂಟವು ದೇಶದ ಮುದ್ರಕರಿಗೆಲ್ಲಾ ಇಂದು ಮುದ್ರಕರ ಕಪ್ಪು ದಿನವನ್ನಾಗಿ ಆಚರಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ, ಜಿಲ್ಲೆಯ ಮುದ್ರಕರು ಕೈಗೆ ಕಪ್ಪು ಬಟ್ಟೆ ಕಟ್ಟುವುದರ ಮೂಲಕ ಮುದ್ರಣಾಲಯದ ಮುಂದೆ, ಯಂತ್ರಗಳ ಮುಂದೆ ನಿಂತು ಪ್ರತಿಭಟಿಸಿದರು. 

ಇದನ್ನು ಸೆಲ್ಪಿ ತೆಗೆದು ನವದೆಹಲಿಯ ಅಖಿಲ ಭಾರತೀಯ ಮುದ್ರಕರ ಒಕ್ಕೂಟಕ್ಕೆ ಇಮೇಲ್ ಮುಖಾಂತರ ಕಳಿಸಲಾಗುವುದು ಮತ್ತು ಭಾರತದಾದ್ಯಂತ ಇದೇ ರೀತಿ ಬಂದಂತಹ ಸೆಲ್ಪಿಗಳನ್ನು ಕ್ರೋಢೀಕರಿಸಿ ಪ್ರಧಾನಿ ಅವರಿಗೆ ಹಾಗೂ ಸಂಬಂಧಪಟ್ಟ ಮಂತ್ರಾಲಯಗಳಿಗೆ ದಾಖಲಿಸುವುದಾಗಿ ಸಂಘದ ಅಧ್ಯಕ್ಷ ಎ.ಎಂ. ಪ್ರಕಾಶ್ ತಿಳಿಸಿದ್ದಾರೆ.

error: Content is protected !!