ಕೊರೊನಾ ; ನಿರ್ಲಕ್ಷ್ಯದ ಬದಲು ಜಾಗೃತರಾಗಿ : ಡಿಎಚ್ಓ

ದಾವಣಗೆರೆ, ಮಾ.22- ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ.  ಸಾರ್ವಜನಿಕರು  ಹೆಚ್ಚು ಜಾಗೃತವಾಗಿರಬೇಕಿದ್ದು, ನಿರ್ಲಕ್ಷ್ಯ ವಹಿಸಬೇಡಿ  ಎಂದು ಡಿಎಚ್ ಓ ನಾಗರಾಜ್ ಸಾರ್ವಜನಿಕರಿಗೆ ಕರೆ ನೀಡಿದರು.

ಅವರು, ನಗರದ ಕಾಯಿಪೇಟೆಯಲ್ಲಿ ಸುಭಿಕ್ಷಾ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಕೊರೊನಾ ಜಾಗೃತಿ ಮತ್ತು ಸಂತೆಯಲ್ಲಿ ಸೇರಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಸೋಂಕು ಇಡೀ ಜಗತ್ತನೇ ತಲ್ಲಣಗೊಳಿಸಿದೆ. ಇದೀಗ ಮತ್ತೆ ಎರಡನೇ ಅಲೆ ಉಂಟಾಗಿದ್ದು, ಮತ್ತೆ ಸೋಂಕು ಏರುಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸರ್ಕಾರದ  ಮಾರ್ಗ ಸೂಚಿಗಳನ್ನು  ಪಾಲಿಸಬೇಕು ಎಂದರು.

ಸುಭಿಕ್ಷಾ ಫೌಂಡೇಷನ್ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು. ಈ ವೇಳೆ ಡಿಎಚ್ ಓ ಸಂತೆಯಲ್ಲಿ ಸಾರ್ವಜಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಮಾಸ್ಕ್‌ಗಳನ್ನು ವಿತರಿಸಿದರು. 

ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ  ಗೋಣೆಪ್ಪ, ಅನಿತಾ ಮಾಲತೇಶ್ ರಾವ್, ಲಕ್ಷ್ಮಿ ರವಿಶಂಕರ್,  ಸುಭಿಕ್ಷಾ ಫೌಂಡೇಷನ್ ಕಾರ್ಯದರ್ಶಿ ಸೌಮ್ಯ ಜಾಧವ್, ಸದಸ್ಯರಾದ ಜಯಂತ್, ಆಶಾ, ಸುಮಾ,  ಭಾಗ್ಯ ಪಿಸಾಳೆ, ಸೌಂದರ್ಯ ಸೇರಿದಂತೆ ಇತರರು ಇದ್ದರು.

error: Content is protected !!